ಗೋಣಿಕೊಪ್ಪಲು, ಫೆ. ೨೪: ಬಾಳೆಲೆ ಹೋಬಳಿಯ ದೇವನೂರು ಗ್ರಾಮದ ೪೦೦ ವರ್ಷಗಳ ಇತಿಹಾಸ ಹೊಂದಿರುವ ಮಹಾದೇವರ ದೇವಾಲಯದಲ್ಲಿ ಬ್ರಹ್ಮ ಕಲಶೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಇದೇ ಸಂದರ್ಭ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಪೊನ್ನಣ್ಣ ವಿಶೇಷ ಪೂಜೆ ಸಲ್ಲಿಸಿ ರೂ. ೭.೫ ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.

ವಿಶ್ವನಾಥ ಭಟ್ಟ ಕೊಳ್ಚಪ್ಪೆ ಹಾಗೂ ತಂಡದಿAದ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ದೇವತಾ ಪ್ರಾರ್ಥನೆ, ವಾಸ್ತು ಹೋಮ, ವಾಸ್ತು ಬಲಿ, ಪಂಚಗವ್ಯ ಪುಣ್ಯಾಹ, ಮಹಾಗಣಪತಿ ಹೋಮ, ನವಗ್ರಹ ಶಾಂತಿ, ಆಶ್ಲೇಷ ಬಲಿ, ದುರ್ಗಾಪೂಜೆ, ಮೃತ್ಯುಂಜಯ ಹೋಮ, ಅನುಜ್ಞಾ ಪ್ರಾರ್ಥನೆ, ಜೀವೋದ್ವಾಸನ ವಿಧಿ, ಕುಂಬೇಶ ಕರ್ಕರಿ ಪೂಜೆ, ಅದ್ದಿವಾಸ ಹೋಮ, ಬ್ರಹ್ಮ ಕುಂಭ ಪೊರಣ, ಶಯ್ಯಾಪೂಜೆ, ಭದ್ರಕ ಪೂಜೆ, ಪ್ರತಿಷ್ಠಾ ಹೋಮ, ಶ್ರೀ ಮಹಾದೇವರ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಅಷ್ಟಬಂಧಕ್ರಿಯೆ, ಶಿಖಿರ ಪ್ರತಿಷ್ಠೆ, ವಾಹನ ಪ್ರತಿಷ್ಠೆ,ಪಂಚಾಮೃತ ಅಭಿಷೇಕ ಸಹಿತ ರುದ್ರಾಭಿಷೇಕ, ಬ್ರಹ್ಮ ಕಲಶಾಭಿಷೇಕ ಮಹಾಪೂಜೆ, ಕ್ಷೇತ್ರ ಅನುಷ್ಠಾನ ನಿಶ್ವಯ, ಮಂತ್ರಾಕ್ಷತೆ, ಶ್ರೀ ದೇವರ ಉತ್ಸವ ಬಲಿ, ಬಟ್ಟಲು ಕಾಣಿಕೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳು ನಡೆದವು.

ಈ ಸಂದರ್ಭ ಮಾತನಾಡಿದ ಶಾಸಕ ಪೊನ್ನಣ್ಣ, ದೇವಸ್ಥಾನದ ಪ್ರಗತಿಗಾಗಿ ಮುಜರಾಯಿ ಇಲಾಖೆಯಿಂದ ೧೦ ಲಕ್ಷ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ ಭರವಸೆ ನೀಡಿದರು.

ದೇವಾಲಯ ಸಮಿತಿಯ ಪ್ರಮುಖರಾದ ಆದೇಂಗಡ ವಿನು ಉತ್ತಪ್ಪ ಮಾತನಾಡಿ, ಕಳೆದ ಒಂದೂವರೆ ವರ್ಷದ ಹಿಂದೆ ದಾನಿಗಳ ಸಹಕಾರದಿಂದ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ದೇವಾಲಯವು ಸುಂದರವಾಗಿ ನಿರ್ಮಾಣವಾಗಿದೆ. ದೇವಸ್ಥಾನದ ಸರ್ವಾಂಗೀಣ ಅಭಿವೃದ್ದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ದೇವಾಲಯ ಸಮಿತಿಯ ಪ್ರಮುಖರುಗಳಾದ ಆದೇಂಗಡ ವಾಸು ಬೆಳ್ಳಿಯಪ್ಪ, ಆದೇಂಗಡ ವಿನು ಉತ್ತಪ್ಪ, ಆದೇಂಗಡ ದಿನೇಶ್, ಆದೇಂಗಡ ರಮೇಶ್ ಚಿಟ್ಟಿಯಪ್ಪ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು