ಸಿದ್ದಾಪುರ, ಫೆ. ೨೪: ಕೆಲಸ ಮಾಡುತ್ತಿದ್ದ ಸಂದರ್ಭ ವ್ಯಕ್ತಿಯೋರ್ವನ ದೇಹಕ್ಕೆ ಗುಂಡು ತಗುಲಿರುವ ಘಟನೆ ನಡೆದಿದೆ.
ಸಿದ್ದಾಪುರ ಸಮೀಪದ ಆನಂದಪುರ ನಿವಾಸಿ ಆನೆಸ್ ಡಿ ಕುಂಞÂ (೬೩) ಗುಂಡು ತಗುಲಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಮಧ್ಯಾಹ್ನ ೧೨ ಗಂಟೆ ವೇಳೆಯಲ್ಲಿ ತಮ್ಮ ಮನೆಯ ಹಿಂಭಾಗದಲ್ಲಿ ಸೌದೆಗಳನ್ನು ತೆಗೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಏಕಾಏಕಿ ತೋಟದ ಮಧ್ಯೆಯಿಂದ ಬಂದೂಕಿನಿAದ ಸ್ಫೋಟಿಸಿದ ಗುಂಡು ಆನೆಸ್ ಅವರ ಕಾಲು ಹಾಗೂ ಎದೆ ಭಾಗಕ್ಕೆ ಹೊಕ್ಕಿ ಗಾಯಗೊಂಡಿದ್ದಾರೆ. ಅವರ ಪುತ್ರಿ ತಕ್ಷಣ ಸ್ಥಳೀಯರ ನೆರವಿನಿಂದ ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ವೃತ್ತ ನಿರೀಕ್ಷಕ ಪಿ.ಕೆ. ರಾಜು ಅವರುಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಮಡಿಕೇರಿಯಿಂದ ಶ್ವಾನದಳ ತೆರಳಿ ಸ್ಥಳದಲ್ಲಿ ಹುಡುಕಾಟ ನಡೆಸಿತು. ಗುಂಡು ಯಾವ ಕಡೆಯಿಂದ ಬಂದಿದೆ ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದು, ಆರೋಪಿಗಳ ಪತ್ತೆಗೆ ತನಿಖೆ ಬಿರುಸುಗೊಂಡಿದೆ.