ಮುಳ್ಳೂರು, ಫೆ. ೨೪: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ-ಸೋಮವಾರಪೇಟೆ ಮತ್ತು ತಾ.ಪಂ ವ್ಯಾಪ್ತಿಗೆ ಒಳಪಟ್ಟ ೭ ಅಂಗನವಾಡಿಗಳ ಸಂಯುಕ್ತ ಆಶ್ರಯದಲ್ಲಿ ದೊಡ್ಡಕುಂದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಹಾಗೂ ಸೀಮಂತ, ಅಕ್ಷರಾಭ್ಯಾಸ, ಅನ್ನಪ್ರಾಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬ್ಯಾಡಗೊಟ್ಟ ಗ್ರಾ.ಪಂ ಅಧ್ಯಕ್ಷೆ ಪಾವನ ಗಗನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯ್ತನ ಹೆಣ್ಣಿಗೊಲಿದ ಒಂದು ಅದೃಷ್ಟ. ಇದನ್ನು ಸಂಭ್ರಮಿಸುವುದೇ ಸೀಮಂತ ಕಾರ್ಯವಾಗಿದೆ. ಆದರೆ

ಸೀಮಂತ ಎಂಬುದು ಕೇವಲ ಸಂಭ್ರಮಾಚರಣೆಯಲ್ಲ, ಇದೊಂದು ಸಂಸ್ಕಾರ. ಗರ್ಭವತಿಯಾದ ಹೆಣ್ಣುಮಗಳು ಮತ್ತು ಆಕೆಯ ಕರುಳ ಕುಡಿಗೆ ಸರ್ವವೂ ಶುಭವಾಗಿಸುವ ಮತ್ತು ಹರಿಸುವ ಸಂಪ್ರದಾಯಬದ್ಧ ಶಾಸ್ತçವಾಗಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ವನಿತಾ ಮಾತನಾಡಿ, ಮಹಿಳೆಯರು ಗರ್ಭಧರಿಸಿದ ಮೊದಲ ತಿಂಗಳಲ್ಲಿಯೇ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ತಾಯಿ ಕಾರ್ಡ್ ಮಾಡಿಸಿ ಪ್ರತಿ ತಿಂಗಳು ವೈದ್ಯರ ಸಲಹೆ ಪಡೆದು ತಮ್ಮ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭ ಗರ್ಭಿಣಿಯರಿಗೆ ಸೀಮಂತ ಶಾಸ್ತç ನೆರವೇರಿಸಲಾಯಿತು. ಪುಟಾಣಿ ಮಕ್ಕಳಿಗೆ ಅಕ್ಕಿಯ ತಟ್ಟೆಯಲ್ಲಿ ‘ಓಂ’ ಎಂದು ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಸತ್ಯ, ವಿವಿಧ ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ, ವನಿತ, ವಿಮಲ, ಪವಿತ್ರ, ರಾಣಿ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.