ಬೆಂಗಳೂರು, ಫೆ. ೨೦: ಆಡಳಿತಾತ್ಮಕ ನಿಟ್ಟಿನಿಂದ ದುರ್ನಡತೆ ಆರೋಪ ಸಾಬೀತಾಗಿದ್ದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ವಜಾಗೊಳಿಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ.
ಗದಗ-ಬೇಟಗೇರಿ ಸಿಟಿ ಮುನಿಸಿಪಾಲಿಟಿಯ ಸದಸ್ಯರಾದ ಉಷಾ ಮಹೇಶ್ ದಾಸರ, ಅನಿಲ್ ಎಂ.ಅಬ್ಬಿಗೇರಿ ಮತ್ತು ಗುಳ್ಳಪ್ಪ ಎಸ್.ಮುಷಿಗೇರಿ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿಯಿತು. ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಕೆಲವು ವ್ಯಕ್ತಿಗಳ ಜೊತೆ ಶಾಮೀಲಾಗಿ ಮುನಿಸಿಪಾಲಿಟಿ ಆಯುಕ್ತರ ಸಹಿಯನ್ನು ನಕಲು ಮಾಡಿ, ಸುಳ್ಳು ನಿರ್ಣಯವನ್ನು ಸೃಷ್ಟಿಸಿ ಒತ್ತುವರಿದಾರರಿಗೆ ಭೂ ಸ್ವಾಧೀನ ಪತ್ರ ನೀಡಿದ್ದ ಆರೋಪದಲ್ಲಿ ತಮ್ಮನ್ನು ವಜಾಗೊಳಿಸಿದ್ದ ಪೌರಾಡಳಿತ ಇಲಾಖೆಯ ಕ್ರಮ ಪ್ರಶ್ನಿಸಿ ಈ ಮೂವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.ಆರೋಪಿಗಳು ತಾವು ಅಮಾಯಕರು ಎಂದು ಹೇಳುತ್ತಿದ್ದು, ಇಂತಹ ಹೇಳಿಕೆಗಳನ್ನು ಕ್ರಿಮಿನಲ್ ಕೇಸ್ಗಳ ವಿಚಾರಣೆ ವೇಳೆ ಪರಿಗಣಿಸಬಹುದು. ಆದರೆ ಇದು ಆಡಳಿತಾತ್ಮಕ ಕ್ರಮ ಕೈಗೊಳ್ಳುವುದಕ್ಕೆ ಅಡ್ಡಿಯಾಗದು. ಸಾಕಷ್ಟು ಸಾಕ್ಷಾö್ಯಧಾರಗಳನ್ನು ಆಧರಿಸಿ ಕರ್ನಾಟಕ ಮುನಿಸಿಪಾಲಿಟಿಗಳ ಕಾಯಿದೆ ೧೯೬೪ರ ಸೆಕ್ಷನ್ ೪೧ರ ಅನ್ವಯ ಸದಸ್ಯರನ್ನು ವಜಾಗೊಳಿಸಿರುವ ಸರ್ಕಾರದ ಕ್ರಮದಲ್ಲಿ ಯಾವುದೇ ದೋಷಗಳಿಲ್ಲ ಎಂದು ಪೀಠ ಹೇಳಿದೆ.
ಅರ್ಜಿದಾರ ಆರೋಪಿಗಳು ನಡೆಸಿದ್ದಾರೆನ್ನಲಾದ ನಿರ್ಣಯ ನಕಲು ಮಾಡಿರುವುದು ಕೆಎಂಸಿ ಕಾಯಿದೆ ಸೆಕ್ಷನ್ ೪೧ರಡಿ ಸ್ಪಷ್ಟವಾಗಿ ದುರ್ನಡತೆ ವ್ಯಾಪ್ತಿಗೆ ಒಳಪಡುತ್ತದೆ. ಆರೋಪಿಗಳ ವಿರುದ್ಧದ ಆರೋಪದ ಕೃತ್ಯದ ಕುರಿತು ಎಲ್ಲಾ ಮುನಿಸಿಪಲ್ ದಾಖಲೆಗಳನ್ನು ಮತ್ತು ಸ್ವತಂತ್ರ ಪರಿಶೀಲನೆ ನಂತರ ಸಾಕಷ್ಟು ಸಾಕ್ಷಾö್ಯಧಾರಗಳನ್ನು ಸಂಗ್ರಹ ಮಾಡಿದ ನಂತರವೇ ಅವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಲಾಗಿದೆ. ಹಾಗಾಗಿ, ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪೀಠ ತಿಳಿಸಿದೆ. - ಕೋವರ್ ಕೊಲ್ಲಿ ಇಂದ್ರೇಶ್