ಕುಶಾಲನಗರ, ಫೆ ೨೦: ಕೊಡಗು ಕಲಾವಿದರ ಸಂಘದ ಸಭೆ ಸಂಘದ ಜಿಲ್ಲಾಧ್ಯಕ್ಷರಾದ ಕೊಟ್ಟುಕತ್ತಿರ ಪ್ರಕಾಶ್ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ಕೆ.ಕೆ ಗ್ರೂಪ್ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತ ನಾಡಿದ ಅವರು, ಕೊಡಗು ಕಲಾವಿದರ ಸಂಘ ನೋಂದಣಿ ಆಗಿ ಐದು ವರ್ಷಗಳು ತುಂಬಿವೆ. ಸಂಘ ನೋಂದಣಿಯಾದ ಪ್ರಾರಂಭದ ದಿನಗಳಲ್ಲಿ ಸಹಕಾರದ ಕೊರತೆಯಿಂದಾಗಿ ಯಾವುದೇ ರೀತಿಯ ಕಾರ್ಯಕ್ರಮ ಮಾಡಲು ಸಾಧ್ಯವಾಗಲಿಲ್ಲ, ಆದರೆ ಇತ್ತೀಚಿನ ವರ್ಷಗಳಲ್ಲಿ ಹಿರಿಯ ಕಲಾವಿದರಾದ ನೆರವಂಡ ಉಮೇಶ್ ಅವರ ಪ್ರೋತ್ಸಾಹ ಹಾಗೂ ಸ್ಥಳೀಯ ಕಲಾವಿದರ ಸಹಕಾರದಿಂದ ನಾಲ್ಕು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿರುವುದು ಸಂತೋಷದ ವಿಷಯವಾಗಿದೆ ಎಂದರು.
ಸAಘ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿರುವ ಕಾರಣ ಸಮಿತಿಯನ್ನು ಪುನರ್ರಚನೆ ಮಾಡ ಬೇಕಿದೆ ಹಾಗೂ ಸಂಘದ ಸದಸ್ಯತ್ವ ಆಂದೋಲನ ಮಾಡುವ ಮೂಲಕ ಕೊಡಗಿನ ಎಲ್ಲಾ ಕಲಾವಿದರನ್ನು ಒಟ್ಟುಗೂಡಿಸುವ ಪ್ರಯತ್ನ ಆಗಬೇಕು ಎಂದರು.
ಕಲಾವಿದರಾದ ನೆರವಂಡ ಉಮೇಶ್ ಮಾತನಾಡಿ, ಕೊಡಗಿನ ಎಲ್ಲಾ ಕಲಾವಿದರು ಸೇರಿಕೊಂಡು ಕಲಾವಿದರ ಸಂಘವನ್ನು ಬಲಿಷ್ಠವಾಗಿ ಕಟ್ಟುವ ಮೂಲಕ ನಮ್ಮ ಸ್ಥಳೀಯ ಕಲಾವಿದರ ಪ್ರತಿಭೆಗೆ ಉತ್ತಮವಾದ ಅವಕಾಶವನ್ನು ನೀಡವಂತಾಗಲಿ ಎಂದರು. ಸಭೆಯಲ್ಲಿ ಸಂಘದ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯ ಪ್ರಾರಂಭದಲ್ಲಿ ಚೆರುವಾಳಂಡ ಸುಜಲ ನಾಣಯ್ಯ ಪ್ರಾರ್ಥನೆಗೈದರು. ಸಂಘದ ಪ್ರಧಾನ ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್ ಸ್ವಾಗತಿಸಿದರು ಹಾಗೂ ವಂದನಾರ್ಪಣೆಯನ್ನು ಮಲ್ಲಮಾಡ ಶಾಮಲಾ ಸುನೀಲ್ ನೆರವೇರಿಸಿದರು.