ಮಡಿಕೇರಿ, ಫೆ. ೨೦: ಬರಹಗಾರರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಕೊಡಗಿನಲ್ಲಿ ನಡೆಯಬೇಕು. ಆ ಮೂಲಕ ಬರಹಗಾರರು ಎಲ್ಲೆಡೆ ಗುರುತಿಸಿಕೊಳ್ಳುವಂತಾಗಬೇಕು ಎಂದು ಹಿರಿಯ ಸಾಹಿತಿ ಬಾಲಸುಬ್ರಮಣ್ಯ ಕಂಜರ್ಪಣೆ ಹೇಳಿದರು.
ನಗರದ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಗು ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಕ್ತಿ ಪತ್ರಿಕೆಯ ಸ್ಥಾಪಕರಾದ ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಕೆ.ಬಿ. ಸೂರ್ಯಕುಮಾರ್ ಅವರಿಗೆ ವೈದ್ಯ ಕಂಡ ವಿಸ್ಮಯ ಕೃತಿಗಾಗಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕೃತಿ, ಲೇಖನ ರಚನೆಗೆ ವಯಸ್ಸಿನ ನಿರ್ಬಂಧ ಇಲ್ಲ. ಯಾವುದೇ ವಯಸ್ಸಿನಲ್ಲಿಯೂ ಉತ್ತಮ ಲೇಖನ, ಕೃತಿ ರಚನೆ ಸಾಧ್ಯವಿದೆ. ಸೂರ್ಯಕುಮಾರ್ ಅವರೇ ಈ ಮಾತಿಗೆ ಉತ್ತಮ ನಿದರ್ಶನವಾಗಿದ್ದಾರೆ ಎಂದು ಬಾಲಸುಬ್ರಮಣ್ಯ ಕಂಜರ್ಪಣೆ ಹೇಳಿದರು.
ಹಿರಿಯ ಸಾಹಿತಿ ಬಿ.ಎ. ಷಂಶುದ್ದೀನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಕ್ತಿ ಪತ್ರಿಕೆ ಪ್ರಭಾವಶಾಲಿ ಪತ್ರಿಕೆಯಾಗಿದ್ದರೂ ಕೂಡ ಅದನ್ನು ಎಂದಿಗೂ ಸ್ವಾರ್ಥಕ್ಕಾಗಿ ಅಥವಾ ಸ್ವಯಂ ಲಾಭಕ್ಕಾಗಿ ಗೋಪಾಲಕೃಷ್ಣ ಅವರು ಬಳಸಿಕೊಳ್ಳಲಿಲ್ಲ. ತಾನು ಶಕ್ತಿಯಲ್ಲಿ ಉಪಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಗೋಪಾಲಕೃಷ್ಣ ಹಾಗೂ ಅವರ ಹಿರಿಯ ಪುತ್ರ ಯದುಮಣಿ ಅವರು ತನ್ನೊಳಗೆ ಕನ್ನಡ ಭಾಷೆಯ ಜ್ಞಾನವನ್ನು ತುಂಬಿದ ಗುರುಗಳಾಗಿದ್ದಾರೆ ಎಂದು ಸ್ಮರಿಸಿದರು. ನಾಟಕ ನಿರ್ದೇಶಕರೂ, ಕೊಡುಗೈ ದಾನಿಗಳೂ ಆಗಿದ್ದ ಗೋಪಾಲಕೃಷ್ಣ ಅವರು ತಮ್ಮ ನೇರ ಹಾಗೂ ನಿಷ್ಠುರ ಬರಹಗಳ ಮೂಲಕ ಕೊಡಗಿನ ಒಳಿತಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ವಾರ ಪತ್ರಿಕೆ, ಸಂಜೆ ಪತ್ರಿಕೆ, ಮಾಸ ಪತ್ರಿಕೆಗಳನ್ನೂ ಗೋಪಾಲಕೃಷ್ಣ ಅವರು ನಡೆಸಿದ್ದರು. ಕೊಡಗಿನ ಜನರಿಗಾಗಿಯೆ ಪತ್ರಿಕೆಯನ್ನು ಮುನ್ನಡೆಸಿದ ಪತ್ರಕರ್ತ ಗೋಪಾಲಕೃಷ್ಣ ಅವರ ಬದುಕು ಈಗಿನ ಪತ್ರಕರ್ತರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಬಿ.ಎಸ್. ಗೋಪಾಲಕೃಷ್ಣ ಅವರು ವೃತ್ತಿಯಲ್ಲಿ ಪತ್ರಿಕೋದ್ಯಮಿಯಾಗಿ ನೇರ ಹಾಗೂ ನಿಷ್ಠುರವಾದಿ ವ್ಯಕ್ತಿತ್ವದವರಾಗಿದ್ದರು.ಅಬ್ಬಿ ಜಲಪಾತ ಬಳಿ ನಡೆದಿದ್ದ ಸಿದ್ದರಾಜು ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವಲ್ಲಿ, ಕೊಡಗಿಗೆ ಮಾರಕವಾಗಬಹುದಾಗಿದ್ದ ಕಂಬದ ಕಡ ಯೋಜನೆ ವಿರುದ್ಧದ ಹೋರಾಟದಲ್ಲಿ ಆಗ ಶಕ್ತಿ ಗೋಪಾಲಕೃಷ್ಣ ಅವರು ಮಹತ್ವದ ಪಾತ್ರ ವಹಿಸಿದ್ದರು. ಕೊಡಗಿನ ಪತ್ರಿಕೋದ್ಯಮದಲ್ಲಿ ಬಿ.ಎಸ್.ಜಿ. ಅವರ ಸೇವೆ ಸದಾ ಸ್ಮರಣೀಯವಾದದ್ದು ಎಂದು ಬಣ್ಣಿಸಿದರು.
ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಮಾತನಾಡಿ, ಗೋಪಾಲಕೃಷ್ಣ ಅವರು ಪರರ ಕಷ್ಟಗಳಿಗೆ ಸ್ಪಂದಿಸುವ ಗುಣದವರಾಗಿದ್ದರು. ತೀಕ್ಷ÷್ಣ್ಣವಾದ ಬರಹ ಶೈಲಿ ಅವರ ಸಾಮರ್ಥ್ಯವಾಗಿತ್ತು. ಅಧ್ಯಾತ್ಮ ಹಾಗೂ ಗಮಕದಲ್ಲಿ ಸಾಧಕರಾಗಿದ್ದ ಗೋಪಾಲಕೃಷ್ಣ ಅವರು ಪತ್ರಿಕೋದ್ಯಮದಲ್ಲಿ ಭೀಷ್ಮ ಎಂದು ಖ್ಯಾತರಾದವರು. ಬಹುಮುಖ ವ್ಯಕ್ತಿತ್ವದ ಅವರು ಬಹಳಷ್ಟು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.
ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಪ್ರತಿಯೊಂದು ವಿಚಾರದಲ್ಲೂ ಅಚ್ಚುಕಟ್ಟುತನ ಕಾಪಾಡಿಕೊಳ್ಳಲು ಗೋಪಾಲಕೃಷ್ಣ ಅವರು ಒತ್ತು ನೀಡುತ್ತಿದ್ದರು. ಬದುಕಿನುದ್ದಕ್ಕೂ ಶಿಸ್ತು ಸಮಯ ಪಾಲನೆಯೆ ಅವರ ಆದ್ಯತೆಯಾಗಿತ್ತು ಎಂದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಪ್ರತೀ ವೈದ್ಯನಲ್ಲಿಯೂ ಬರಹಗಾರನಿದ್ದಾನೆ. ೪ಏಳನೇ ಪುಟಕ್ಕೆ
೪ಏಳನೇ ಪುಟಕ್ಕೆ ವೈದ್ಯನೋರ್ವ ಲೇಖಕನೂ ಆದಾಗ ಅವರೊಳಗಿನ ಅನೇಕ ವಿಚಾರಗಳ ಜ್ಞಾನ ಓದುಗನಿಗೂ ನಿಲುಕುತ್ತದೆ. ಇದಕ್ಕೆ ಡಾ. ಸೂರ್ಯಕುಮಾರ್ ಅವರ ವೈದ್ಯಕೀಯ ಕ್ಷೇತ್ರದ ಕುರಿತ ಕುತೂಹಲಕಾರಿ ಕೃತಿಗಳೇ ಉದಾಹರಣೆಯಾಗಿದೆ ಎಂದು ನುಡಿದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಪುರುಷ ಲೇಖಕರಿಗಾಗಿಯೆ ಇರುವಂತಹ ಪ್ರತಿಷ್ಠಿತ ಗೋಪಾಲಕೃಷ್ಣ ದತ್ತಿ ಪ್ರಶಸ್ತಿಯನ್ನು ಪಡೆಯಲು ಪುರುಷ ಲೇಖಕರು ಅತ್ಯುತ್ತಮ ಕೃತಿಗಳ ಮೂಲಕ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು. ಪ್ರಶಸ್ತಿ ಸ್ವೀಕರಿಸಿದ ಲೇಖಕ ಡಾ. ಕೆ.ಬಿ. ಸೂರ್ಯಕುಮಾರ್ ಮಾತನಾಡಿ, ಶಕ್ತಿ ಕೊಡಗಿನ ಜನರ ಅವಿಭಾಜ್ಯ ಅಂಗವಾಗಿದೆ ಎಂದರಲ್ಲದೇ, ಲೇಖಕನಿಗೆ ಓದುಗರೇ ದೇವರು. ಓದುಗರು ಮೆಚ್ಚಿದರೆ ಮಾತ್ರ ಲೇಖಕ ಬೆಳೆಯಲು ಸಾಧ್ಯ ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯ ಕಂಡ ವಿಸ್ಮಯ ಕೃತಿ ಇತರ ವೈದ್ಯರುಗಳಿಗೆ ಸ್ಫೂರ್ತಿಯಾಗಲಿ, ಇತರ ವೈದ್ಯರುಗಳು ಕೂಡ ಸೂರ್ಯಕುಮಾರ್ ಅವರಂತೆ ಸಾಹಿತ್ಯದತ್ತ ಒಲವು ತೋರುವಂತಾಗಲಿ ಎಂದರು.
ಪ್ರಶಸ್ತಿ ಪ್ರದಾನ ಸಂದರ್ಭ ಗೀತಾ ಸೂರ್ಯಕುಮಾರ್, ರಾಜಲಕ್ಷಿö್ಮ ಗೋಪಾಲಕೃಷ್ಣ, ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ವೇದಿಕೆಯಲ್ಲಿದ್ದರು. ವಿದುಷಿ ಮೇಘಾಭಟ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಸ್ವಾಗತಿಸಿ, ಪರಿಷತ್ ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್ ಅತಿಥಿ ಪರಿಚಯ ಮಾಡಿದರು. ಪತ್ರಕರ್ತರ ಸಂಘದ ನಿರ್ದೇಶಕ ಉಜ್ವಲ್ ರಂಜಿತ್ ವಂದಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಸುಬ್ರಾಯ ಸಂಪಾಜೆ, ಪ್ರತಿಮಾ ಹರೀಶ್ ರೈ, ರಜನಿ ಕಾರ್ಯನಿರ್ವಹಿಸಿದ್ದರು.