ನಾಪೋಕ್ಲು, ಫೆ. ೨೦: ನಿರ್ವಹಣೆ ಇಲ್ಲದ ಕಟ್ಟಡಗಳು, ನೀರಿಲ್ಲದ ಕಾರಂಜಿ ಕೊಳ, ಬಾಡಿದ ಗಿಡಗಳ ಹೂದೋಟ, ಬೀಗ ಹಾಕಿರುವ ಶಿಥಿಲವಾದ ಕಟ್ಟಡಗಳು, ತುಕ್ಕು ಹಿಡಿದ ಬಾಗಿಲುಗಳು, ವಿದ್ಯುತ್ ಸಂಪರ್ಕವಿಲ್ಲದ ವಿದ್ಯುತ್ ದೀಪಗಳು, ನಿರ್ವಹಣೆ ಇಲ್ಲದ ಸಿಸಿ ಕ್ಯಾಮೆರಾಗಳು... ಇದು ಮಡಿಕೇರಿಯಲ್ಲಿರುವ ರಾಜರ ಗದ್ದುಗೆಗಳ ದುಸ್ಥಿತಿ!

ಮಡಿಕೇರಿ ಪಟ್ಟಣದ ಬನ್ನಿ ಮಂಟಪದ ಬಳಿ ರಾಜರ ಗದ್ದುಗೆಗಳಿವೆ. ವೀರರಾಜೇಂದ್ರ ಹಾಗೂ ಆತನ ಪತ್ನಿ, ಲಿಂಗರಾಜೇAದ್ರನ ಗದ್ದುಗೆಗಳು ಇಲ್ಲಿವೆ. ಇದನ್ನು ಕ್ರಿ.ಶ. ೧೫೨೦ ರಲ್ಲಿ ಲಿಂಗರಾಜೇAದ್ರನ ಪುತ್ರ ಚಿಕ್ಕವೀರರಾಜ ಕಟ್ಟಿಸಿದರು. ಈ ಗದ್ದುಗೆಗಳು ಇಂಡೋ ಸಾರಾಸೆನಿಕ್ ಶೈಲಿಯಲ್ಲಿವೆ. ಐತಿಹಾಸಿಕ ಹಿನ್ನೆಲೆಯ ಮಾಹಿತಿಯೊಂದಿಗೆ ಮನಸ್ಸಿಗೆ ಉಲ್ಲಾಸ ನೀಡುವ ತಾಣವಾಗಿದ್ದ ಈ ರಾಜರ ಗದ್ದುಗೆಗಳು ಇಂದು ಶಿಥಿಲಾವಸ್ಥೆಗೆ ತಲುಪಿವೆ. ನಿರ್ವಹಣೆಯ ಕೊರತೆಯಿಂದ ಯಾರಿಗೂ ಬೇಡವಾದ ಸ್ಥಳವಾಗಿದೆ.

ಈ ಹಿಂದೆ ಮುಡಾ ವತಿಯಿಂದ ಗದ್ದುಗೆ ಆವರಣದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಲಾಗಿತ್ತು. ಅಂದದ ಹೂದೋಟದಿಂದ ಗದ್ದುಗೆ ಸ್ಥಳೀಯರನ್ನು, ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಇದೀಗ ಉದ್ಯಾನವನ ನಿರ್ವಹಣೆ ಇಲ್ಲದೆ ಸೊರಗಿ ಕಾಡು ಕೊಂಪೆಯಾಗಿದೆ. ಇನ್ನು ಕಟ್ಟಡಗಳ ಪರಿಸ್ಥಿತಿ ಹೇಳತೀರದ್ದಾಗಿದ್ದು, ಸುಣ್ಣ ಬಣ್ಣ ಕಾಣದೆ ಕಟ್ಟಡಗಳು ಕಳೆಗುಂದಿವೆ. ಶಿಲಾಫಲಕಗಳು, ಕಬ್ಬಿಣದ ಗೇಟುಗಳು ಎಲ್ಲವೂ ತುಕ್ಕು ಹಿಡಿದಿದ್ದು, ಹೀಗೆ ಬಿಟ್ಟರೆ ಈ ಐತಿಹಾಸಿಕ ಕುರುಹುಗಳು ಮೂಲೆಗುಂಪಾಗಲಿವೆ. ಆದ್ದರಿಂದ ಐತಿಹಾಸಿಕ ಗದ್ದುಗೆಗಳ ನಿರ್ವಹಣೆಗೆ ಪುರಾತತ್ವ ಇಲಾಖೆ ಮುಂದಾಗಬೇಕು ಎಂಬುದು ಪ್ರವಾಸಿಗರ ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.

ರಾಜ್ಯದ ಗದ್ದುಗೆಗಳ ಈಗಿನ ಪರಿಸ್ಥಿತಿ ನೋಡಿದಾಗ ಬೇಸರವಾಗುತ್ತದೆ. ನಾನು ೪೮ ವರ್ಷಗಳ ಹಿಂದೆ ಇದೇ ಗದ್ದುಗೆ ಆವರಣದಲ್ಲಿ ಕೋಲಾಟ್, ಬೋಳಕಾಟ್ ತರಬೇತಿಯನ್ನು ನೀಡುತ್ತಿದ್ದಾಗ ಈ ಸ್ಥಳ ಬಹಳ ಸುಂದರವಾಗಿತ್ತು. ಆದರೆ ಇದೀಗ ನಿರ್ವಹಣೆ ಇಲ್ಲದೆ ಸೊರಗಿದೆ.ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬAಧಪಟ್ಟ ಇಲಾಖೆ ಇದರ ಗತವೈಭವವನ್ನು ಮರುಕಳಿಸುವಂತೆ ಮಾಡಬೇಕಾಗಿದೆ ಎಂದು ಹಿರಿಯ ಜಾನಪದ ತಜ್ಞ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಒತ್ತಾಯಿಸಿದ್ದಾರೆ.

- ದುಗ್ಗಳ ಸದಾನಂದ.