ಸಿದ್ದಾಪುರ, ಫೆ. ೨೦: ಸಂಚರಿಸುತ್ತಿದ್ದ ಗೂಡ್ಸ್ ಆಟೋಗೆ ಕಾಡುಕೋಣ ಡಿಕ್ಕಿಯಾದ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಪರಿಣಾಮ ಕಾಡುಕೋಣದ ಬಲಗಾಲು ಮುರಿದಿದ್ದು, ಆಟೋ ಕೂಡ ಜಖಂಗೊAಡಿದೆ.

ವೀರಾಜಪೇಟೆಯಿಂದ ಕರಡಿಗೋಡು ಗ್ರಾಮಕ್ಕೆ ಅನಾಸ್ ಎಂಬವರು ಬೆಳಿಗ್ಗೆ ೯ ಗಂಟೆ ವೇಳೆಗೆ ಕೆಲಸಕ್ಕೆಂದು ಆಟೋ ಚಲಾಯಿಸಿಕೊಂಡು ತೆರಳುತ್ತಿದ್ದ ಸಂದರ್ಭ ಕಾಫಿ ತೋಟದ ಒಳಗಿನಿಂದ ರಸ್ತೆಗೆ ಅಡ್ಡಲಾಗಿ ಏಕಾಏಕಿ ಬಂದ ಕಾಡುಕೋಣ ಗೂಡ್ಸ್ ಆಟೋಗೆ ಡಿಕ್ಕಿಯಾಗಿದೆ. ಕಾಡುಕೋಣ ಡಿಕ್ಕಿ ಹೊಡೆದ ರಭಸಕ್ಕೆ ಆಟೋರಿಕ್ಷಾ ಜಖಂಗೊAಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾಡುಕೋಣದ ಬಲಗಾಲಿಗೆ ಗಂಭೀರ ಗಾಯವಾಗಿ ಅಸ್ವಸ್ಥವಾಗಿ ಬಿದ್ದಿದೆ.

ಈ ಬಗ್ಗೆ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ತಕ್ಷಣವೇ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಘಟನೆಯ ಸಂಬAಧ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ ಗಾಯಗೊಂಡ ಕಾಡುಕೋಣಕ್ಕೆ ಪಶು ವೈದ್ಯಾಧಿಕಾರಿ ಡಾ.ನವೀನ್ ಕುಮಾರ್ ಚಿಕಿತ್ಸೆ ನೀಡಿದರು. ಈ ಸಂದರ್ಭದಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಉಪ ವಲಯ ಅರಣ್ಯ ಅಧಿಕಾರಿ ಸಂಜೀತ್ ಸೋಮಯ್ಯ, ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ಅಂದಾಜು ೪ ರಿಂದ ೫ ವರ್ಷ ಪ್ರಾಯದ ಕಾಡುಕೋಣ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದೆ. ಇದನ್ನು ಸಮೀಪದ ಅರಣ್ಯಕ್ಕೆ ಬಿಡಲಾಗುವುದು. ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಅರಣ್ಯಾಧಿಕಾರಿ ಶಿವರಾಮ್ ತಿಳಿಸಿದ್ದಾರೆ. - ವಾಸು