ಮಡಿಕೇರಿ, ಫೆ. ೨೦: ಹತ್ತು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುರುತಿಸಿಕೊಂಡಿರುವ ಕುಶಾಲನಗರ ರೋಟರಿ ಕ್ಲಬ್ ಈ ಬಾರಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ೧೯೭೬ರಲ್ಲಿ ಆರಂಭಗೊAಡ ಈ ಕ್ಲಬ್ ಐವತ್ತು ವರ್ಷಗಳನ್ನು ಪೂರೈಸುತ್ತಿದ್ದು, ಈ ಸವಿ ನೆನಪಿಗಾಗಿ ಕುಶಾಲನಗರದ ಭುವನಗಿರಿಯಲ್ಲಿ ರೂ. ೨೦ ಲಕ್ಷಕ್ಕೂ ಅಧಿಕ ಮೊತ್ತದ ಹಸಿ ಕಸ ನಿರ್ವಹಣಾ ಘಟಕ ಸ್ಥಾಪನೆ, ಹಸಿದವರಿಗೆ ಮೂರು ಹೊತ್ತು ಉಚಿತವಾಗಿ ಊಟ ನೀಡುವ ‘ಹಸಿದವರಿಗೆ ಅನ್ನ’ ಯೋಜನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಕುಶಾಲನಗರವನ್ನು ಸ್ವಚ್ಛ, ಸುರಕ್ಷಾ ಹಾಗೂ ಹಸಿರು ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಕ್ಲಬ್ ಪಣ ತೊಟ್ಟಿದೆ.

ಸ್ವಚ್ಛ - ಹಸಿರು ಪಟ್ಟಣ

ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಕುಶಾಲನಗರದಲ್ಲಿನ ಕಸ ಸಂಗ್ರಹಣೆಗಾಗಿ ಭುವನಗಿರಿಯಲ್ಲಿ ಕುಶಾಲನಗರ ಪುರಸಭೆ ವತಿಯಿಂದ ಕಸ ಸಂಗ್ರಹಣಾ ಘಟಕವನ್ನು ಸ್ಥಾಪಿಸಲಾಗಿದೆ. ಆದರೆ ಹಸಿ ಕಸವನ್ನು ಸಂಗ್ರಹಿಸಲು ಅಲ್ಲಿ ಯಾವುದೇ ಘಟಕಗಳಿಲ್ಲ. ಈ ಹಿನ್ನೆಲೆಯಲ್ಲಿ ದಾನಿಗಳಾದ ಎಸ್‌ಎಲ್‌ಎನ್ ಸಂಸ್ಥೆಯ ನೆರವಿನೊಂದಿಗೆ ಅಲ್ಲಿ ರೂ. ೨೦ ಲಕ್ಷಕ್ಕೂ ಅಧಿಕ ಮೊತ್ತದ ಹಸಿ ಕಸ ನಿರ್ವಹಣಾ ಘಟಕ ಸ್ಥಾಪಿಸಲು ಕುಶಾಲನಗರ ರೋಟರಿ ಮುಂದಾಗಿದೆ. ಅಲ್ಲದೆ ಪುರಸಭೆ, ಎಸ್‌ಎಲ್‌ಎನ್ ಸಂಸ್ಥೆಯ ಸಹಯೋಗದೊಂದಿಗೆ ಈ ಘಟಕದ ನಿರ್ವಹಣೆಯ ಜವಾಬ್ದಾರಿಯನ್ನು ಕೂಡ ರೋಟರಿ ಕ್ಲಬ್ ವಹಿಸಿಕೊಳ್ಳಲಿದೆ. ಹಸಿ ಹಾಗೂ ಒಣ ಕಸವನ್ನು ಮನೆಗಳಲ್ಲೇ ವಿಂಗಡಣೆ ಮಾಡಬೇಕು ಎಂಬ ಬಗ್ಗೆ ಜಾಗೃತಿ ಅಭಿಯಾನವನ್ನು ಕ್ಲಬ್ ಹಮ್ಮಿಕೊಂಡಿದ್ದು, ವಾಹನವೊಂದರಲ್ಲಿ ಈ ಬಗ್ಗೆ ಪ್ರಚಾರ ಕಾರ್ಯವನ್ನು ಕೂಡ ಮಾಡಿದೆ. ಅಲ್ಲದೆ ೨೦ ಸಾವಿರ ಕರಪತ್ರಗಳನ್ನು ಮುದ್ರಿಸಿ ಮನೆಮನೆಗೆ ಹಂಚುವ ಮೂಲಕ ಮನೆಮನೆಗಳಲ್ಲಿ ಕಸ ವಿಂಗಡಣೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕುಶಾಲನಗರದ ಎಲ್ಲಾ ವ್ಯಾಪಾರ ಮಳಿಗೆಗಳ ಎದುರು ಭಿತ್ತಿಪತ್ರವನ್ನು ಅಂಟಿಸುವುದಲ್ಲದೆ ವಿದ್ಯಾರ್ಥಿಗಳಿಗೂ ಕೂಡ ಕಸ ಸಂಗ್ರಹ ಹಾಗೂ ವಿಂಗಡಣೆ ಬಗ್ಗೆ ಕಾರ್ಯಾಗಾರಗಳ ಮೂಲಕ ಅರಿವು ಮೂಡಿಸಲು ಮುಂದಾಗಿದೆ.

ಜೀವನದಿ ಕಾವೇರಿಯ ಸಂರಕ್ಷಣೆಗಾಗಿ ಜೀವನದಿ ಕಾವೇರಿಯನ್ನು ಉಳಿಸಿ ಎಂಬ ಅಭಿಯಾನವನ್ನು ಕೂಡ ಕ್ಲಬ್ ಹಮ್ಮಿಕೊಂಡಿದ್ದು, ಕಾವೇರಿ ಸೇತುವೆಗೆ ಬಣ್ಣ ಬಳಿದು ‘ಕಾವೇರಿ ಕೇವಲ ನೀರಲ್ಲ; ಅದು ಪವಿತ್ರ ತೀರ್ಥ. ಆದ್ದರಿಂದ ಯಾರೂ ಕೂಡ ನದಿಗೆ ಕಸ ಹಾಕಬಾರದು’ ಎಂದು ಬರೆಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಕ್ಲಬ್ ಕೈಗೊಂಡಿದೆ. ಅಲ್ಲದೆ ಇತ್ತೀಚೆಗಷ್ಟೆ ‘ಐ ಲವ್ ಕಾವೇರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ವಿವಿಧ ಸಂಘ-ಸAಸ್ಥೆಗಳು, ಸುಮಾರು ೨೫೦ ವಿದ್ಯಾರ್ಥಿಗಳನ್ನು ಒಳಗೊಂಡು ನದಿ ಸ್ವಚ್ಛತಾ ಕಾರ್ಯವನ್ನು ಕೂಡ ಕುಶಾಲನಗರ ರೋಟರಿ ಕ್ಲಬ್ ಹಮ್ಮಿಕೊಂಡಿತ್ತು. ಅಲ್ಲದೆ ಅಲ್ಲಿ ‘ಸ್ವಚ್ಛತೆ ಕಾಪಾಡಿ, ಕೈ ಮುಗಿದು ಒಳಗೆ ಬನ್ನಿ; ಇಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುವುದು’ ಎಂಬ ದೊಡ್ಡ ನಾಮ ಫಲಕವೊಂದನ್ನು ಅಳವಡಿಸಿದೆ.

ಇನ್ನು ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳು ಎಲ್ಲೆಂದರಲ್ಲಿ ಎಸೆಯಲ್ಪಡುವುದನ್ನು ತಡೆಯುವ ಸಲುವಾಗಿ ಕ್ಲಬ್ ವತಿಯಿಂದ ಕುಶಾಲನಗರದ ಕಾವೇರಿ ಸೇತುವೆ, ಸರ್ಕಾರಿ ಬಸ್ ನಿಲ್ದಾಣ, ಕಾವೇರಿ ನಿಸರ್ಗಧಾಮ, ಬ್ಯಾಂಕ್ ಆಫ್ ಬರೋಡಾ ಎದುರು, ಸರಕಾರಿ ಆಸ್ಪತ್ರೆ ಮುಂಭಾಗ, ಚಿಕ್ಲಿಹೊಳೆ ಜಲಾಶಯ ಹಾಗೂ ಹಾರಂಗಿ ಹಾಗೂ ಕೊಪ್ಪ ಜಂಕ್ಷನ್‌ನಲ್ಲಿ ೮ರಿಂದ ೧೦ ಅಡಿ ಎತ್ತರ, ೪ ಅಡಿ ಅಗಲದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ತೊಟ್ಟಿಗಳನ್ನು ಇಡಲಾಗಿದೆ. ಕುಶಾಲನಗರ ಅರಣ್ಯ ಇಲಾಖೆ ಕಚೇರಿ, ಸರ್ಕಾರಿ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ೪ ಸ್ಥಳಗಳಲ್ಲಿ ಸ್ವಚ್ಛ ಕುಶಾಲನಗರ ಅಭಿಯಾನದ ಭಿತ್ತಿಪತ್ರ ಹಾಕಲಾಗಿದೆ ಇವೆಲ್ಲವೂ ಸ್ವಚ್ಛ ಹಾಗೂ ಹಸಿರು ಪಟ್ಟಣ ಪರಿಕಲ್ಪನೆಯ ಕಾರ್ಯಕ್ರಮಗಳಾಗಿವೆ. ಬೈಲುಕುಪ್ಪೆಯ ಸಿಜೆ ಬಿಲ್ಡ್ ವೇರ್ ಸಂಸ್ಥೆ ಹಸಿರು ಪಟ್ಟಣ ಯೋಜನೆಗೆ ಕ್ಲಬ್‌ನೊಂದಿಗೆ ಕೈಜೋಡಿಸಿದೆ.

ಹಸಿದವರಿಗೆ ಅನ್ನ

ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ‘ಹಸಿದವರಿಗೆ ಅನ್ನ’ ಎಂಬ ಯೋಜನೆಯನ್ನು ಕ್ಲಬ್‌ನಿಂದ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ ಯಾರಿಗೇ ಹಸಿವಾದರೂ ಕುಶಾಲನಗರದ ನಿಸರ್ಗ ಹೊಟೇಲ್‌ನಲ್ಲಿ ಕೂಪನ್ ಮೂಲಕ ಉಚಿತವಾಗಿ ಮೂರು ಹೊತ್ತು ಊಟ ಮಾಡಬಹುದಾಗಿದೆ. ಅದರ ವೆಚ್ಚವನ್ನು ರೋಟರಿ ಕ್ಲಬ್‌ನ ಸದಸ್ಯರೆ ಒಟ್ಟಾಗಿ ಭರಿಸಲಿದ್ದಾರೆ.

ಸುರಕ್ಷಾ ಪಟ್ಟಣ

ಕುಶಾಲನಗರವನ್ನು ಸುರಕ್ಷಿತ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರಿ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ೮ ಸಿಸಿ ಕ್ಯಾಮರಾಗಳನ್ನು ಈಗಾಗಲೇ ಅಳವಡಿಸಲಾಗಿದೆ. ಕುಶಾಲನಗರ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಕಾರ್ಯಪ್ಪ ವೃತ್ತದಲ್ಲಿ ರೂ. ೧.೫ ಲಕ್ಷ ವೆಚ್ಚದಲ್ಲಿ ಉನ್ನತ ತಂತ್ರಜ್ಞಾನ ಹಾಗೂ ಗುಣಮಟ್ಟದ ಕ್ಯಾಮರಾವೊಂದನ್ನು ಅಳವಡಿಸಲು ಕುಶಾಲನಗರ ರೋಟರಿ ಕ್ಲಬ್ ಮುಂದಾಗಿದೆ ಈ ಕ್ಯಾಮರಾ ಅಳವಡಿಕೆಯಿಂದ ರಸ್ತೆ ಬದಿ ಕಸ ಎಸೆಯುವವರನ್ನು ಪತ್ತೆ ಹಚ್ಚಲು, ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಹೊರಭಾಗದಿಂದ ಅಪರಾಧವೆಸಗಿ ಜಿಲ್ಲೆಗೆ ಆಗಮಿಸುವವರನ್ನು ಕಂಡು ಹಿಡಿಯಲು ಸಹಕಾರಿಯಾಗಲಿದೆ. ವ್ಯಕ್ತಿ ಹಾಗೂ ವಾಹನಗಳ ಸಂಖ್ಯೆಯನ್ನು ಸ್ಪಷ್ಟವಾಗಿ ಈ ಕ್ಯಾಮೆರಾ ಸೆರೆ ಹಿಡಿಯುವುದರಿಂದ ಪೊಲೀಸ್ ಇಲಾಖೆಗೂ ಇದರಿಂದ ಅನುಕೂಲವಾಗಲಿದೆ ಎಂಬುದು ಕ್ಲಬ್‌ನ ಉದ್ದೇಶವಾಗಿದೆ.

ಕುಶಾಲನಗರದಲ್ಲಿರುವ ಸುಮಾರು ೧೮೦ ವರ್ಷಗಳ ಇತಿಹಾಸವಿರುವ ಹಳೆ ಸೇತುವೆ ಪ್ರಸ್ತುತ ಕಸ ಎಸೆಯಲು, ಆತ್ಮಹತ್ಯೆ ಮಾಡಿಕೊಳ್ಳಲು ಬಳಕೆಯಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸೇತುವೆ ಸುತ್ತ ಗ್ರಿಲ್ ಅಳವಡಿಸಿ ಅಲ್ಲಿ ಉದ್ಯಾನವನ್ನು ನಿರ್ಮಿಸಲು ಕ್ಲಬ್ ಯೋಜನೆ ಹಮ್ಮಿಕೊಂಡಿದೆ. ಕುಶಾಲನಗರ ಪತ್ರಕರ್ತರ ಭವನ ನಿರ್ಮಾಣಕ್ಕೂ ರೂ ೫೦ ಸಾವಿರ ಅನುದಾನವನ್ನು ಕುಶಾಲನಗರ ರೋಟರಿ ಕ್ಲಬ್ ಒದಗಿಸಿದೆ.

ಮಾರ್ಚ್ ೧ ರಂದು ಕಾರ್ಯಕ್ರಮ

ಕುಶಾಲನಗರ ರೋಟರಿ ಕ್ಲಬ್‌ನ ಸುವರ್ಣ ಸಂಭ್ರಮ ಕಾರ್ಯಕ್ರಮ ಮಾರ್ಚ್ ೧ ರಂದು ಎಸ್‌ಎಲ್‌ಎನ್ ಗ್ರಾö್ಯಂಡ್ ಸಭಾಂಗಣದಲ್ಲಿ ಮಧ್ಯಾಹ್ನ ೩ ಗಂಟೆಗೆ ನಡೆಯಲಿದ್ದು, ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ೩.೧೫ಕ್ಕೆ ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಅವರು ಸಮಾಜ ಸೇವೆಯ ಶಕ್ತಿ, ರೋಟರಿಯ ಪರಿಣಾಮಗಳ ಕುರಿತು ಹಾಗೂ ಯುವ ಜನತೆಗೆ ಸ್ಫೂರ್ತಿದಾಯಕ ಮಾತುಗಳನ್ನಾಡಲಿದ್ದಾರೆ. ೪.೧೫ಕ್ಕೆ ರೋಟರಿ ಸುವರ್ಣ ಸಂಭ್ರಮ, ಸಂಜೆ ೫.೩೦ ಗಂಟೆಗೆ ಖ್ಯಾತ ಉದ್ಯಮಿಗಳಾದ ಕುಶಾಲನಗರದ ಎಸ್‌ಎಲ್‌ಎನ್‌ನ ಸಾತಪ್ಪನ್ ಹಾಗೂ ವಿಶ್ವನಾಥನ್ ಅವರುಗಳಿಗೆ ರೋಟರಿ ಗೋಲ್ಡನ್ ಪರ್ಸನಾಲಿಟಿ ಅವಾರ್ಡ್ ನೀಡಲಾಗುತ್ತದೆ. ಕುಶಾಲನಗರ ಹಾಗೂ ಇನ್ನಿತರ ಕಡೆಗಳ ಗಂಭೀರ ಸಮಸ್ಯೆಗಳ ಕುರಿತಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರೊಂದಿಗೆ ಸಂವಾದವನ್ನು ಸಂಜೆ ೬ ಗಂಟೆಗೆ ಏರ್ಪಡಿಸಲಾಗಿದ್ದು, ಮುಂದಿನ ಹತ್ತು ವರ್ಷದಲ್ಲಿ ಕುಶಾಲನಗರ ಹೇಗಿರಲಿದೆ? ಈ ನಿಟ್ಟಿನಲ್ಲಿ ಶಾಸಕರ ದೃಷ್ಟಿಕೋನವೇನು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಸಂವಾದವನ್ನು ಮನು ಪೆಮ್ಮಯ್ಯ ನಡೆಸಿಕೊಡಲಿದ್ದಾರೆ.

ರಾತ್ರಿ ೭ ಗಂಟೆಗೆ "ಸರಿಗಮಪ" ವಿನ್ನರ್ ವರ್ಣ ಚೌಹಾಣ್, ಕನ್ನಡ ಕೋಗಿಲೆ ವಿನ್ನರ್ ಖಾಸಿಮ್ ಆಲಿ ಅವರಿಂದ ಗಾಯನ ಕಾರ್ಯಕ್ರಮ, ೭.೩೦ ಗಂಟೆಗೆ ಖ್ಯಾತ ಗಾಯಕ ಚಂದನ್‌ಶೆಟ್ಟಿ ಹಾಗೂ ತಂಡದಿAದ ಸಂಗೀತ ಸಂಜೆ, ೮ ಗಂಟೆಗೆ ಖ್ಯಾತ ಮಿಮಿಕ್ರಿ ಕಲಾವಿದ ಗೋಪಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್, ದೀಪಿಕಾ ಅವರಿಂದ ಹಾಸ್ಯ ಕಾರ್ಯಕ್ರÀಮ, ೮.೩೦ಕ್ಕೆ ಕೊಡಗು ತಂಡದಿAದ ಕೊಡಗಿನ ಸಾಂಪ್ರದಾಯಕ ನೃತ್ಯ. ಬಿಗ್‌ಬಾಸ್, ಡಿಕೆಡಿ, ಝೀ ತಮಿಳು ಖ್ಯಾತಿಯ ಸಾಗರ್ ತಂಡದಿAದ ನೃತ್ಯ ಪ್ರದರ್ಶನ ಕಾರ್ಯಕ್ರಮಗಳು ಮೂಡಿ ಬರಲಿವೆ. ಹೆಸರಾಂತ ನಿರೂಪಕ ನಿರಂಜನ್ ದೇಶ್‌ಪಾಂಡೆ ನಿರೂಪಕರಾಗಿ ಆಗಮಿಸಲಿದ್ದಾರೆ.

ಸಮಿತಿ

ಪ್ರಸ್ತುತ ಕುಶಾಲನಗರ ರೋಟರಿ ಕ್ಲಬ್‌ನ ಕಾರ್ಯದರ್ಶಿಯಾಗಿ ಹೆಚ್.ಪಿ. ಮಂಜುನಾಥ್, ಖಜಾಂಚಿಯಾಗಿ ಕೆ.ಎಂ. ಜೇಕಬ್, ಸುವರ್ಣ ಸಂಭ್ರಮ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಮಹೇಶ್ ಕುಮಾರ್ ನಲ್ವಾಡೆ, ಡಾ. ಹರಿ ಎ. ಶೆಟ್ಟಿ, ಸಂಚಾಲಕರಾಗಿ ಕ್ರೆಜ್‌ವೆಲ್ ಕೋಟ್ಸ್, ಸಹಾಯಕ ಗವರ್ನರ್ ಆಗಿ ಉಲ್ಲಾಸ್‌ಕೃಷ್ಣ, ಕಾರ್ಯದರ್ಶಿಯಾಗಿ ಎಂ.ಡಿ. ರಂಗಸ್ವಾಮಿ, ಖಜಾಂಚಿಯಾಗಿ ಪಿ.ಆರ್. ನವೀನ್, ಸಹ ಕಾರ್ಯದರ್ಶಿಯಾಗಿ ರಿಚರ್ಡ್ ಡಿಸೋಜ, ಹಣಕಾಸು ಸಮಿತಿ ಅಧ್ಯಕ್ಷರಾಗಿ ಸಿ.ಎ. ರುದ್ರೇಶ್ ಪಟೇಲ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆ.ಎಸ್. ರಾಜಶೇಖರ್, ಕಾರ್ಯನಿರ್ವಹಿಸುತ್ತಿದ್ದಾರೆ.

ವರದಿ: ಉಜ್ವಲ್ ರಂಜಿತ್