ವಿಶೇಷ ವರದಿ: ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಫೆ. ೨೦: ಕಾಡಾನೆಗಳ ಉಪಟಳವನ್ನು ತಹಬದಿಗೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ಅನೇಕ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ ಕಾಡಾನೆಗಳ ಉಪಟಳ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಅರಣ್ಯ ಅಂಚಿನಿAದ ಬರುವ ಕಾಡಾನೆಗಳು ರೈತರ ತೋಟಗಳಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದು ಕಾಡಾನೆಗಳ ಸಮಸ್ಯೆಯಿಂದಾಗಿ ರೈತರು ಬೆಳೆಯುತ್ತಿರುವ ಅಡಿಕೆ, ತೆಂಗು, ಕಾಫಿ, ಗಿಡಗಳನ್ನು ಬುಡ ಸಹಿತ ಕಿತ್ತು ಹಾಕುತ್ತಿದೆ. ಬೆಳೆಗಾರರು ತಮ್ಮ ಬೆಳೆಗೆ ಬೇಕಾದ ನೀರಾವರಿಗೆ ಬಳಸುವ ಪಂಪ್ ಸೆಟ್‌ಗಳ ಮೇಲೆ ದಾಳಿ ನಡೆಸಿ ಅದನ್ನು ಕೂಡ ಕಿತ್ತು ಹಾಕುತ್ತಿವೆ. ಇದರಿಂದಾಗಿ ರೈತ ಕಂಗಲಾಗಿದ್ದು ರೈತರ ಗೋಳಾಟ ಕೇಳುವವರೇ ಇಲ್ಲದಂತಾಗಿದೆ.

ಕೊಡಗಿನ ರೈತರ, ಕಾಫಿ ಬೆಳೆಗಾರರ ತೋಟದಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದಾಗಿ ರೈತರ ಕಾಫಿ ತೋಟದಲ್ಲಿರುವ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆಯ ಆಂದಾಜಿನ ಪ್ರಕಾರ ನೂರಾರು ಸಂಖ್ಯೆಯಲ್ಲಿ ಕಾಡಾನೆಗಳು ಜಿಲ್ಲೆಯ ವಿವಿಧ ಭಾಗದಲ್ಲಿ ರೈತರ ತೋಟದಲ್ಲಿ ಬೀಡುಬಿಟ್ಟಿವೆ. ಕಾಡಾನೆಗಳು ತೋಟದಲ್ಲಿಯೆ ನೆಲೆಸಿರುವುದರಿಂದ ತೋಟದ ಕೆಲಸಕ್ಕೆ ತೀವ್ರ ಅಡ್ಡಿಯಾಗುತ್ತಿವೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಅರಣ್ಯ ಪ್ರದೇಶಕ್ಕೆ ತೆರಳಲು ಹಿಂದೇಟು ಹಾಕುತ್ತಿವೆ.

ಕಾಫಿ ತೋಟದಲ್ಲಿ ಸಿಗುವ ರುಚಿಕರವಾದ ಹಲಸಿನ ಕಾಯಿ, ಬಾಳೆ, ಅಡಿಕೆ ಹಾಗೂ ಇತರ ಬೆಳೆಗಳನ್ನು ತಿನ್ನುತ್ತಿರುವ ಕಾಡಾನೆಗಳು ಕಾಫಿ ಹಣ್ಣು ಬಿಡುವ ಸಂದರ್ಭದಲ್ಲಿ ಕಾಫಿ ಹಣ್ಣನ್ನು ಕೂಡ ತಿನ್ನಲಾರಂಭಿಸಿವೆ. ಇದರಿಂದ ರೈತನಿಗೆ ಕಷ್ಟದ ಮೇಲೆ ಕಷ್ಟ ಎದುರಾಗುತ್ತಿದೆ. ಹಲವು ಅನುಕೂಲಸ್ಥ ಕಾಫಿ ಬೆಳೆಗಾರರು ತಮ್ಮ ತೋಟ ಹಾಗೂ ಗದ್ದೆಗಳಿಗೆ ಸೋಲಾರ್ ಬೇಲಿಯನ್ನು ಅಳವಡಿಸಿ ಕಾಡಾನೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಕಾಡಾನೆಗಳು ಒಮ್ಮೆ ತೋಟ ಪ್ರವೇಶಿಸಿದರೆ ಮತ್ತೆ ಇದೇ ತೋಟ ಗುರಿಯಾಗಿಸಿಕೊಂಡು ಹಿಂಡು ಹಿಂಡಾಗಿ ಧಾಳಿ ನಡೆಸಿ ತೋಟದ ಬೆಳೆಗಳನ್ನು ನಷ್ಟಪಡಿಸುತ್ತಿವೆ.

ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ರಾತ್ರಿ ವೇಳೆಯಲ್ಲಿ ರೈತರ ಭತ್ತದ ಗದ್ದೆಗಳಿಗೆ ಧಾಂಗುಡಿ ಇಟ್ಟು ಅಲ್ಲಿರುವ ನಾಟಿ, ಪೈರು ಸೇರಿದಂತೆ ಭತ್ತದ ಗದ್ದೆಯಲ್ಲೆಲ್ಲ ಓಡಾಡಿ ತುಳಿದು ನಾಶ ಮಾಡುತ್ತಿವೆ. ಕಾಡಾನೆ ಗಳು ಕಾಫಿ ತೋಟದಲ್ಲಿ ಮನಬಂದAತೆ ಓಡಾಡುತ್ತಿರುವುದರಿಂದ ಕಾಫಿ, ಗಿಡಗಳ ರೆಂಬೆ-ಕೊAಬೆಗಳು. ರೈತರು ಬೆಳೆದಿದ್ದ ಬಾಳೆ, ಅಡಿಕೆ ಗಿಡಗಳನ್ನು ನಾಶ ಮಾಡುತ್ತಿವೆ.

ಹಲವು ವರ್ಷಗಳಿಂದ ಪೋಷಿಸಿ ಬೆಳೆದಿದ್ದ ಕಾಫಿ ಗಿಡಗಳನ್ನು ಕಳೆದುಕೊಂಡು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿನಿತ್ಯ ಕಾಡಾನೆಗಳಿವೆ ಎಚ್ಚರಿಕೆಯಿಂದ ಓಡಾಡುವಂತೆ ಮಾಹಿತಿ ನೀಡುವ ಅರಣ್ಯ ಇಲಾಖೆ ಸಿಬ್ಬಂದಿ ಇಷ್ಟೊಂದು ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಅಷ್ಟಾಗಿ ಸ್ಪಂದಿಸುತ್ತಿಲ್ಲ. ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನವನ್ನು ಅರಣ್ಯ ಇಲಾಖೆ ಅಲ್ಲಲ್ಲಿ ಕೈಗೊಂಡಿದ್ದರೂ ಅರಣ್ಯಕ್ಕೆ ತೆರಳುವ ಕಾಡಾನೆಗಳು ದಿನ ಕಳೆಯುವುದರೊಳಗೆ ಮತ್ತೆ ರೈತರ ಕಾಫಿ ತೋಟವನ್ನು ಸೇರಿಕೊಳ್ಳುತ್ತಿರುವುದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ದಿಕ್ಕೇ ತೋಚದಂತಾಗಿದೆ.

ತೋಟದಲ್ಲಿರುವ ಅಪಾರ ಪ್ರಮಾಣದ ಬೆಳೆ ನಾಶಪಡಿಸುವ ಕಾಡಾನೆಗಳ ಹಿಂಡು ದಾಂಧಲೆ ನಡೆಸುವುದಲ್ಲದೆ, ಕಾಫಿ ತೋಟದಲ್ಲಿ ರೈತರು ನೀರಾವರಿಗಾಗಿ ಅಳವಡಿಸಿರುವ ಪೈಪ್‌ಗಳನ್ನು ತುಳಿದು ಹಾಕುತ್ತಿವೆ. ಸಮೀಪದ ಕೆರೆಗಳಿಗೆ ಇಳಿದು ಕೆರೆಯಲ್ಲಿ ಅಳವಡಿಸಿರುವ ನೀರಿನ ಮೋಟರ್‌ಗಳನ್ನು ಹಾಳು ಮಾಡುತ್ತಿವೆ. ಇದರಿಂದ ರೈತ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದಾನೆ.

ಶ್ರೀಮಂಗಲ ಹೋಬಳಿಯ ಮಂಚಳ್ಳಿ ಗ್ರಾಮದ ರೈತರಾದ ಬೊಜ್ಜಂಗಡ ಸೋಮಣ್ಣನವರ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ನೆಲೆನಿಂತಿದ್ದು ಫಸಲು ಭರಿತ ೧೮೮ ಅಡಿಕೆ ಗಿಡಗಳನ್ನು ಬುಡ ಸಹಿತ ಕಿತ್ತು ಹಾಕುವ ಮೂಲಕ ಹಾಗೂ ಸ್ಪಿಂಕ್ಲರ್ ಪೈಪ್‌ಗಳಿಗೆ ಹಾನಿಪಡಿಸಿ ಅಪಾರ ನಷ್ಟ ಸಂಭವಿಸಿದೆ. ಇದರಿಂದ ಈ ಭಾಗದ ಸುತ್ತಮುತ್ತಲಿನ ರೈತರು ಕೂಡ ಕಾಡಾನೆಗಳ ಉಪಟಳವನ್ನು ಸಹಿಸಲಾರದ ಪರಿಸ್ಥಿತಿಗೆ ತಂದೊಡ್ಡಿದೆ.