ಕುಶಾಲನಗರ, ಫೆ.೨೦: ಕುಶಾಲನಗರ ಗೌಡ ಮಹಿಳಾ ಸಂಘದ ನೇತೃತ್ವದಲ್ಲಿ ಸಾಂಪ್ರದಾಯಿಕ ಕೆಡ್ಡಸ ಪೂಜೆ ನಡೆಯಿತು.

ಕೆಡ್ಡಸದ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ಒದಗಿಸಿದ ಸಂಘದ ಅಧ್ಯಕ್ಷರಾದ ಕಲಾ ಕರಂದ್ಲಾಜೆ, ಗೌಡ ಸಮುದಾಯದ ಜೀವನ ನೇರವಾಗಿ ಒಕ್ಕಲುತನಕ್ಕೆ ಸಂಬAಧಿಸಿದ್ದು ಭೂಮಿ ತಾಯಿಯ ಆರಾಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಡ್ಡಸ ಪೂಜೆ ಈ ಹಿನ್ನೆಲೆಯಲ್ಲಿ ಸಮುದಾಯದ ಜನರಿಗೆ ಪ್ರಮುಖವಾಗಿದೆ.

ಕ್ಯಾಲೆಂಡರ್ ಪ್ರಕಾರ ಫೆಬ್ರವರಿ ತಿಂಗಳ ಮಧ್ಯದಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಮೂರು ದಿನಗಳ ಅವಧಿಯಲ್ಲಿ ಮೊದಲನೆಯ ದಿನ ಕೊಡಿ ಕೆಡ್ಡಸ, ನಡು ಕೆಡ್ಡಸ, ಕಡೆ ಕೆಡ್ಡಸ ಎಂಬುದಾಗಿ ಹಬ್ಬವನ್ನು ಹೆಚ್ಚಾಗಿ ಕೃಷಿ ಪ್ರಧಾನ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶೇಷ ನಂಬಿಕೆಯೊAದಿಗೆ ಆಚರಿಸುತ್ತಾರೆ ಎಂದು ಮಾಹಿತಿ ನೀಡಿದರು. ಇದೊಂದು ಭೂಮಿಯ ಫಲವತ್ತತೆಯ ಸಂಕೇತವಾಗಿದ್ದು, ಕೆಡ್ಡಸದ ಮೂರು ದಿನಗಳಲ್ಲಿ ರೈತರು ಭೂಮಿಯನ್ನು ಉಳುವಂತಿಲ್ಲ, ಮರ ಗಿಡಗಳನ್ನು ಕಡಿಯುವಂತಿಲ್ಲ ಮತ್ತು ಗುದ್ದಲಿ, ಪಿಕಾಸಿ ಬಳಸಿ ನೆಲ ಅಗೆಯುವಂತಿಲ್ಲ. ಭೂಮಿತಾಯಿಗೆ ಸಂಪೂರ್ಣ ವಿಶ್ರಾಂತಿ ಕೊಡುವ ಸಮಯ ಇದಾಗಿದೆ ಎಂದರು. ಈ ದಿನಗಳ ಸಂದರ್ಭದಲ್ಲಿ ನಡೆಯುವ ಆಚಾರ ವಿಚಾರಗಳನ್ನು ತಿಳಿಸಿದರು.

ಸಂಘದ ನಿರ್ದೇಶಕರಾದ ಕುಕ್ಕುನೂರು ತೀರ್ಥ ಮಾತನಾಡಿ, ಕೆಡ್ಡಸದ ಈ ಮೂರು ದಿವಸಗಳನ್ನು ನಮ್ಮ ಪೂರ್ವ ಪದ್ಧತಿಯಂತೆ ಆಚರಿಸುವುದು ಅವಶ್ಯಕ ಮತ್ತು ನಮ್ಮ ಯುವ ಪೀಳಿಗೆಗೆ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ತಿಳಿಯಬೇಕು ಹಾಗೂ ಇಂಥ ಮುಖ್ಯವಾದ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಯುವ ಪೀಳಿಗೆಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀವಾಣಿ ಕುಯ್ಯಮುಡಿ ಪ್ರಾರ್ಥಿಸಿದರು. ದೇವಕ್ಕಿ ಕುದುಪಜೆ ಸ್ವಾಗತಿಸಿದರು. ಲತಾ ಕಾಳೇರಮ್ಮ ವಂದಿಸಿದರು. ಸಂಘದ ಪ್ರತಿನಿಧಿ ಪ್ರಮೀಳಾ ಪೊಡನೊಳನ, ವಿಂದ್ಯಾ ಕಾಳೇರಮ್ಮ ಇದ್ದರು.