ಚೆಯ್ಯಂಡಾಣೆ, ಫೆ. ೨೦: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಸಿಲ್ವರ್ ಜ್ಯುಬಿಲಿ ಪ್ರಯುಕ್ತ “ಕನೆಕ್ಟ್ ಕೊಡಗು ೨೦೨೬” ಕಾರ್ಯಕ್ರಮವು ಶಾರ್ಜಾ ಅಲ್ ಬಥಾಯ ಗಾರ್ಡನ್‌ನಲ್ಲಿ ನಡೆಯಿತು.
ದೇಶ ಹಾಗೂ ವಿದೇಶಗಳಿಂದ ಆಗಮಿಸಿದ ಗಣ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು, ಮಹಿಳೆಯರಿಗಾಗಿ ವಿಶೇಷ ತರಬೇತಿ ಮತ್ತು ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು. ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ದಫ್ ಪ್ರದರ್ಶನ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿತ್ತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ನಮ್ಮವರು ಎಲ್ಲಿದ್ದರೂ ಅವರು ಸಂಕಷ್ಟದಲ್ಲಿದ್ದಾಗ ನಾವು ಕೈಜೋಡಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುವುದು ನಮ್ಮ ಸಾಮಾಜಿಕ ಹೊಣೆಗಾರಿಕೆ ಎಂದು ಹೇಳಿದರು.
ಹೊಸ್ಕೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಮಾತನಾಡಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯಿಂದ ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬಡವರಿಗೆ ಸಹಾಯವಾಗುತ್ತಿದೆ ಎಂದರು.
ಎಸ್‌ವೈಎಸ್ ರಾಜ್ಯಾಧ್ಯಕ್ಷರು ಹಾಗೂ ಕೊಡಗು ಸುನ್ನಿ ವೆಲ್ಫೇರ್‌ನ ಬೆಂಗಳೂರು ಅಧ್ಯಕ್ಷ ಬಷೀರ್ ಸಅದಿ ಮಾತನಾಡಿ, ಸಂಘಟನೆಯು ಕಳೆದ ೨೫ ವರ್ಷಗಳಲ್ಲಿ ಮಾಡಿದ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದೆಯು ನಿಮ್ಮ ಸೇವೆ ಮುಂದುವರಿಯಲಿ ಎಂದು ಹೇಳಿದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾಧ್ಯಕ್ಷ ಲತೀಫ್ ಸುಂಟಿಕೊಪ್ಪ, ವಕೀಲ ಸುಫಿಯಾನ್ ಮಡಿಕೇರಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ ಮಾತನಾಡಿದರು. ದುಬೈ ಪೊಲೀಸ್ ಮುಖ್ಯಸ್ಥರಾದ ಹಿಸ್ ಎಕ್ಸಲೆನ್ಸಿ ಉಮರ್ ಅಲ್ ಮರ್ಝೂಕಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತ ಹಾಗೂ ಯುಎಇ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಶ್ಲಾಘಿಸಿದರು.
ಇದೆ ಸಂದರ್ಭ ೨೫ನೇ ವಾರ್ಷಿಕ ಪ್ರಯುಕ್ತ ‘ಸೌರಭ’ ಸ್ಮರಣ ಸಂಚಿಕೆಯನ್ನು ಅತಿಥಿಗಳ ಸಮ್ಮುಖದಲ್ಲಿ ಶಾಸಕ ಡಾ. ಮಂತರ್ ಗೌಡ ಬಿಡುಗಡೆ ಮಾಡಿದರು. ಅಲಿ ಮುಸ್ಲಿಯಾರ್ (ಬಹರೈನ್), ತುಮಕೂರು ಮಾಜಿ ಶಾಸಕ ರಫೀಕ್ ಅಹ್ಮದ್, ಹಂಝ ಮುಸ್ಲಿಯಾರ್ (ಸೌದಿ ಅರೇಬಿಯಾ), ಅರಪಾತ್ ನಾಪೋಕ್ಲು, ಅಹ್ಮದ್ ಸಿ.ಹೆಚ್. ನಾಪೋಕ್ಲು, ರಿಯಾಝ್ ಕೊಟ್ಟಮುಡಿ, ಕಬೀರ್ (ಕತಾರ್) ಸಂಘಟನೆಯ ಸ್ಥಾಪಕ ಅಧ್ಯಕ್ಷ ಇಬ್ರಾಹಿಂ ಫೈಝಿ ಚಾಮಿಯಾಲ, ವೆಲ್ಫೇರ್ ಯುಎಇ ಸಮಿತಿ ಹಾಗೂ ಸ್ವಾಗತ ಸಮಿತಿ ನಾಯಕರು ಸೇರಿದಂತೆ ಭಾರತ ಮತ್ತು ಜಿಸಿಸಿ ದೇಶಗಳಿಂದ ಆಗಮಿಸಿದ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಾಲಿಬಾಲ್‌ನಲ್ಲಿ ಆರ್‌ವೈಸಿ ಎಮ್ಮೆಮಾಡು ಪ್ರಥಮ, ಗುಂಡಿಕೆರೆ ದ್ವಿತೀಯ. ಫುಟ್ಬಾಲ್‌ನಲ್ಲಿ ಚಾಮಿಯಾಲ ಪ್ರಥಮ, ಬೆಲ್ಟ್ ಹೌಸ್ ಕೊಂಡAಗೇರಿ ದ್ವಿತೀಯ. ಹಗ್ಗಜಗ್ಗಾಟದಲ್ಲಿ ಚಾಮಿಯಾಲ ಪ್ರಥಮ, ಆರ್‌ವೈಸಿ ಎಮ್ಮೆಮಾಡು ದ್ವಿತೀಯ. ದಫ್ ಸ್ಪರ್ಧೆಯಲ್ಲಿ ಗುಂಡಿಕೆರೆ ಚಾಂಪಿಯನ್ ಪಟ್ಟ ಅಲಂಕರಿಸಿತು.