ನಾಪೋಕ್ಲು, ಫೆ. ೧೬: ಕೆಡ್ಡಸ ಹಬ್ಬವು ಪ್ರಕೃತಿ ಹಾಗೂ ಭೂಮಿತಾಯಿಗೆ ಗೌರವ ಸೂಚಿಸುವ ಹಬ್ಬವಾಗಿದೆ ಎಂದು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಹೇಳಿದರು.
ಇಲ್ಲಿಗೆ ಸಮೀಪದ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡ್ಡಸ ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಡ್ಡಸ ಹಬ್ಬವು ಪ್ರಕೃತಿ ಹಾಗೂ ಭೂಮಿ ತಾಯಿಗೆ ಗೌರವ ಸೂಚಿಸುವ ಹಬ್ಬ, ಹಾಗೆಯೇ ರೈತರು ಕೃಷಿ ಕಾರ್ಯದಿಂದ ಕೊಂಚ ವಿರಾಮ ಪಡೆಯುವ ಹಬ್ಬ. ಈ ಸಂದರ್ಭ ಸೋತು ಸೊರಗಿದ ಗಿಡ ಮರಗಳಲ್ಲಿ ಚಿಗುರು, ಹೂ-ಮೊಗ್ಗು ಕಾಣಿಸಿಕೊಳ್ಳುತ್ತದೆ. ಜೇನಿ-ದುಂಬಿಗಳ ಹಾರಾಟ ಹೆಚ್ಚಾಗುತ್ತದೆ. ಪ್ರಕೃತಿ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡು ಮುಂದಿನ ಫಲ ನೀಡಲು ಸಿದ್ಧವಾಗಿರುತ್ತದೆ. ಇಂತಹ ಸಮಯದಲ್ಲಿ ಪ್ರಕೃತಿಗೆ ಹಾನಿಯಾಗುವ ಯಾವುದೇ ಕಾರ್ಯಗಳನ್ನು ಮಾಡಿದಲ್ಲಿ ಫಲ ಹಾನಿಯಾಗುತ್ತದೆ ಎಂಬುದು ವೈಜ್ಞಾನಿಕ. ಭೂತಾಯಿಗೆ ವಿಶ್ರಾಂತಿ ನೀಡಲು ಪರಿಸರಕ್ಕೆ ಹಾನಿಯಾಗುವ ಯಾವುದೇ ಕೃಷಿ ಕೆಲಸಗಳನ್ನು ಮಾಡಬಾರದು ಎಂಬುದು ಸಾಂಪ್ರದಾಯಿಕ ವಿಚಾರ.
ಕೆಡ್ಡಸವನ್ನು ಬೇಟೆಯ ಹಬ್ಬ ಎಂದೂ ಕರೆಯುತ್ತಾರೆ. ವಿರಾಮದ ಕಾಲವಾದ್ದರಿಂದ ಹಿಂದೆಲ್ಲ ಹೊಳೆಗಳಲ್ಲಿ ಮೀನು ಹಿಡಿಯುತ್ತಿದ್ದರು. ಹಾಗೆಯೇ ಕಾಡುಪ್ರಾಣಿಗಳಿಗೆ ಈ ಸಮಯದಲ್ಲಿ ಕಾಲುನೋವು ಬರುವ ಕಾರಣ ಅವುಗಳನ್ನು ಸುಲಭವಾಗಿ ಬೇಟೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಮಹಿಳೆಯರು ಕೂಡ ಒನಕೆ ಹಿಡಿದು ಬೇಟೆ ಮಾಡುತ್ತಿದ್ದರು. ಒಟ್ಟಿನಲ್ಲಿ ಕೆಡ್ಡಸ ವಿಶ್ರಾಂತಿಯ ಹಬ್ಬ, ಮಾಂಸಾಹಾರದ ಹಬ್ಬ ಎಂದು ಹೆಸರು ಪಡೆದಿದೆ ಎಂದರು.
ಒಕ್ಕೂಟದ ಉಪಾಧ್ಯಕ್ಷೆ ಹೊಸೊಕ್ಲು ಲತಾ ಮೊಣ್ಣಪ್ಪ ಅವರು ಮಾತನಾಡಿ, ಕೆಡ್ಡಸ ಹಬ್ಬವನ್ನು ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಆಚರಣೆ ಮಾಡುತ್ತಾರೆ. ಅದರಲ್ಲೂ ಪ್ರಾಂತ್ಯವಾರು ಆಚರಣೆಯಲ್ಲಿ ವ್ಯತ್ಯಾಸಗಳಿರುತ್ತವೆ. ಪೂರ್ವ ಪದ್ಧತಿಯಂತೆ ನಮಗೆ ತಿಳಿದಷ್ಟು ಮಟ್ಟಿಗೆ ಇಂತಹ ಅಪರೂಪದ ಹಬ್ಬಗಳನ್ನು ಆಚರಿಸುವುದರಿಂದ ಮುಂದಿನ ಪೀಳಿಗೆಗೆ ನಮ್ಮ ಸಾಂಪ್ರದಾಯಿಕ ಆಚರಣೆಗಳು ತಿಳಿಯುವುದಲ್ಲದೆ ಅದರ ಪೋಷಣೆಯೂ ಆಗುತ್ತದೆ. ಅಲ್ಲದೆ ನಮ್ಮ ಸಮುದಾಯದ ಆಚರಣೆಗಳ ಪರಿಚಯವೂ ಆಗುತ್ತದೆ ಎಂದರು.
ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷೆ ಕೂರನ ಸುಶೀಲ ಅಪ್ಪಾಜಿ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ, ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಳೇರಮ್ಮನ ರಶಿ ಅಶೋಕ್ ಪ್ರಾರ್ಥಿಸಿ , ಹೊಸೊಕ್ಲು ಲತಾ ಮೊಣ್ಣಪ್ಪ ಸ್ವಾಗತಿಸಿದರು. ಕೂಡಕಂಡಿ ಸೋನಿ ಸುದೀಪ್ ಕಾರ್ಯಕ್ರಮ ನಿರೂಪಿಸಿ ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ ವಂದಿಸಿದರು.