ಸೋಮವಾರಪೇಟೆ, ಫೆ. ೧೬: ಕೊಡಗು ಜಿಲ್ಲಾದ್ಯಂತ ಆವರಿಸಿಕೊಂಡಿರುವ ಅಸ್ಸಾಂ ಸೋಗಿನ ಅಕ್ರಮ ಬಾಂಗ್ಲಾದೇಶಿಗರನ್ನು ಹೊರಹಾಕುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದ್ದು, ಈ ಬಗ್ಗೆ ಸರ್ಕಾರಗಳ ಗಮನ ಸೆಳೆಯಲು ಮಾ.೨ ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಪ್ರವೀಣ್ ಶೆಟ್ಟಿ ಬಣದ ಕರವೇ ಅಧ್ಯಕ್ಷ ಕೆ.ಎನ್. ದೀಪಕ್, ಮಾ.೨ ರಂದು ಪಟ್ಟಣದಲ್ಲಿ ಅಕ್ರಮ ವಲಸಿಗರ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ಕಕ್ಕೆಹೊಳೆ ಸಮೀಪದ ಶ್ರೀ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಜೇಸಿ ವೇದಿಕೆಯಲ್ಲಿ ಪ್ರತಿಭಟನಾ ಸಭೆ ನಡೆದು, ನಂತರ ತಹಶೀಲ್ದಾರ್ ಅವರ ಮೂಲಕ ಪ್ರಧಾನ ಮಂತ್ರಿಯವರಿಗೆ, ಗೃಹ ಇಲಾಖೆಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಅಕ್ರಮ ವಲಸಿಗರ ವಿರುದ್ಧ ಕಳೆದ ೧೦ ವರ್ಷಗಳಿಂದ ಕರವೇ ಹೋರಾಟ ಮಾಡಿಕೊಂಡು ಬರುತ್ತಿದೆ. ಆದರೆ ಸರ್ಕಾರಗಳು ಸೂಕ್ತ ಕ್ರಮಕೈಗೊಂಡಿಲ್ಲ. ಪ್ರಸಕ್ತ ಅಕ್ರಮ ವಲಸಿಗರ ಹಾವಳಿ ಮಿತಿಮೀರಿದೆ. ಇನ್ನಾದರೂ ಗೃಹ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ, ಇಲ್ಲಿನ ನಿವಾಸಿಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ. ಎನ್‌ಐಎ ಮೂಲಕ ತಪಾಸಣೆ ನಡೆಸಬೇಕಿದೆ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಕಾನೂನಿನಂತೆ ಗಡೀಪಾರು ಮಾಡಬೇಕು. ಗೃಹ ಇಲಾಖೆಗೆ ಒಂದು ತಿಂಗಳ ಗಡುವು ನೀಡಲಾಗುವುದು. ತಪ್ಪಿದಲ್ಲಿ ಜಿಲ್ಲಾ ಕೇಂದ್ರದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಲೈನ್‌ಮನೆಯಲ್ಲಿ ಬಾಂಗ್ಲಾ ವಲಸಿಗರಿಗೆ ಅಕ್ರಮವಾಗಿ ಆಶ್ರಯ ಕೊಟ್ಟಿರುವ ಮಾಲೀಕರ ವಿರುದ್ಧ ಕಡ್ಡಾಯವಾಗಿ ಕ್ರಿಮಿನಲ್ ಮತ್ತು ರಾಷ್ಟçದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಸೋಗಿನಲ್ಲಿರುವ ಅಕ್ರಮ ವಲಸಿಗರಿಂದ ಸ್ಥಳೀಯ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕನ್ನಡಿಗರ ಅನ್ನ-ದುಡಿಮೆಯನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಲ್ಲಿನ ಕಾರ್ಮಿಕರು ಕೂಲಿ ಇಲ್ಲದೆ ಪರದಾಡುತ್ತಿದ್ದಾರೆ. ಕೆಲ ವಲಸಿಗರು ದೇಶದ ಕಾನೂನನ್ನು ಗೌರವಿಸುತ್ತಿಲ್ಲ. ಕೆಲ ಕಡೆ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದಾರೆ. ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ, ಮದ್ಯಪಾನ ಮಾಡುತ್ತಾರೆ. ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಾರೆ. ಗೋಹತ್ಯೆಯಲ್ಲೂ ಭಾಗಿಯಾಗುತ್ತಿದ್ದಾರೆ. ಎಂದು ದೂರಿದರು.
ಕಳೆದ ೩೫ ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಸರೋಜಿನಿ ಮಹಿಷಿ(ಕನ್ನಡಿಗರಿಗೆ ಕಡ್ಡಾಯ ಉದ್ಯೋಗ) ವರದಿಯನ್ನು ಕೂಡಲೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ವಸಂತ್ ಆಚಾರ್ಯ, ನಗರ ಘಟಕ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಕಾರ್ಯದರ್ಶಿ ಕೆ.ಪಿ.ರವೀಶ್, ಸಂಚಾಲಕ ಶೇಖರ್ ತಾಕೇರಿ ಇದ್ದರು.