ನಾಪೋಕ್ಲು, ಫೆ. ೧೬: ಇಸ್ಲಾಮಿನ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಹೇಳಿದರು.
ಸಮೀಪದ ಚೆರಿಯಪರಂಬು ಮುಖಾಂ ಉರೂಸ್ ಸಮಾರಂಭದ ಸಾರ್ವಜನಿಕ ಸಮ್ಮೇಳನ ಹಾಗೂ ಸಮಾರೋಪ ಸಮಾರಂಭದ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿಗೆ ಯುವ ಪೀಳಿಗೆ ಇಸ್ಲಾಮಿನ ಆದರ್ಶ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಪೋಷಕರು ತಮ್ಮ ಮಕ್ಕಳ ಜೀವನದಲ್ಲಿ ಉತ್ತಮ ಆದರ್ಶ ತತ್ವಗಳನ್ನು ಅಳವಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಸಬೇಕು ಎಂದರು. ಚೆರಿಯಪರಂಬು ಜಮಾಅತ್ ಅಧ್ಯಕ್ಷ ಪಿ.ಎ ಅಹಮದ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಮಹಮ್ಮದ್ ಇರ್ಫಾನ್, ಕಕ್ಕುಂದಕಾಡು ವೆಂಕಟೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಪಿ ಗೋಪಾಲ, ಪೊಲೀಸ್ ಠಾಣಾಧಿಕಾರಿ ಪಿ.ಜಿ. ರಾಘವೇಂದ್ರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಮತ್ತಿತರರು ಪಾಲ್ಗೊಂಡಿದ್ದರು.
ಮೊದಲಿಗೆ ಕಾರ್ಯಕ್ರಮವನ್ನು ಅಬ್ದುಲ್ಲಾ ಫೈಜಿ ಉದ್ಘಾಟಿಸಿದರು. ಸಮಾರಂಭದ ಅಂಗವಾಗಿ ಹಿರಿಯರ ಮತ್ತು ವಿದ್ಯಾರ್ಥಿಗಳ ದಫ್ ಪ್ರದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉರೂಸ್ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.