ಕುಶಾಲನಗರ, ಫೆ.೧೪: ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ತೆರೆಯಲು ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ.ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ವಿಭಾಗೀಯ ಅಧ್ಯಕ್ಷರಾದ ಪಿ.ಎಸ್ ಕುಮಾರಸ್ವಾಮಿ ನೇತೃತ್ವದಲ್ಲಿ ಪದಾಧಿಕಾರಿಗಳು, ಶನಿವಾರಸಂತೆಗೆ ಇತ್ತೀಚೆಗೆ ಆಗಮಿಸಿದ್ದ ಸಂದರ್ಭ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕ್ಷೇತ್ರದ ಶಾಸಕರ ಮೂಲಕ ಮನವಿ ಪತ್ರ ಸಲ್ಲಿಸಿದರು.

ಜಿಲ್ಲೆಯ ಕುಶಾಲನಗರದಲ್ಲಿ ಈಗಾಗಲೇ ಬಸ್ ಡಿಪೋ ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದು ವೀರಾಜಪೇಟೆಯಲ್ಲಿ ನೂತನ ಸಾರಿಗೆ ಘಟಕ ನಿರ್ಮಾಣ ಮಾಡುವುದು, ಕುಶಾಲನಗರದಲ್ಲಿ ವಿಭಾಗೀಯ ಕಾರ್ಯಾಗಾರ ಸ್ಥಾಪನೆ ಮತ್ತು ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಕೋರಿದ್ದಾರೆ.

ಕೊಡಗು ಜಿಲ್ಲೆ ಹಲವು ವರ್ಷಗಳಿಂದ ಮಂಗಳೂರು, ಮೈಸೂರು, ಪುತ್ತೂರು ವಿಭಾಗದ ಕೇಂದ್ರಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಬಸ್ ಸೌಲಭ್ಯದ ಕೊರತೆ ಇನ್ನೂ ನೀಗಿಲ್ಲ, ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಆದಷ್ಟು ಶೀಘ್ರದಲ್ಲಿ ಕೊಡಗು ಜಿಲ್ಲೆಯಲ್ಲಿ ವಿಭಾಗೀಯ ಕಚೇರಿ ಮತ್ತು ವಿಭಾಗೀಯ ಕಾರ್ಯಗಾರ ತೆರೆಯುವಂತೆ ಮನವಿ ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.