ಸುಂಟಿಕೊಪ್ಪ, ಫೆ. ೧೪: ಪ್ರತಿಯೊಬ್ಬರು ಆರ್ಥಿಕ ಶಿಸ್ತು ಮೈಗೂಡಿಸಿಕೊಂಡು ಸಬಲರಾಗಬೇಕೆಂದು ಅವಾರ್ಡ್ ಸಂಸ್ಥೆಯ ಕುಶಾಲನಗರ ತಾಲೂಕಿನ ಪ್ರತಿನಿಧಿ ಹರೀಶ್ ಕರೆ ನೀಡಿದರು.

ಆರ್ಥಿಕ ಸಾಕ್ಷರತಾ ಸಪ್ತಾಹ ಅಂಗವಾಗಿ ಕಂಬಿಬಾಣೆ ಮತ್ತು ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬ್ಯಾಂಕ್ ಖಾತೆಗಳನ್ನು ಹೊಂದಿರುವ ಪ್ರತಿಯೊಬ್ಬ ಗ್ರಾಹಕರು ಕೆವೈಸಿ, ಸಿಕೆವೈಸಿ ಮಾಡಿಸಿಕೊಂಡು ವ್ಯವಹರಿಸಬೇಕು.

ಗ್ರಾಹಕರ ಖಾತೆಯಲ್ಲಿ ಆಗುವ ದುರುಪಯೋಗ ಮತ್ತು ವಂಚನೆಗಳನ್ನು ಇದರಿಂದ ತಡೆಯಲು ಸಾಧ್ಯವೆಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿನ ಖಾತೆಗಳಲ್ಲಿಡುವ ಹಣವನ್ನು ಸೈಬರ್ ವಂಚಕರು ವಂಚಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ರಕ್ಷಿಸುವ ದಿಸೆಯಲ್ಲಿ ಕೆವೈಸಿ, ಸಿಕೆವೈಸಿ ಮಾಡಿಸಿಕೊಳ್ಳುವುದರಿಂದ ದುರುಪಯೋಗ ತಪ್ಪಲಿದೆ ಎಂದರು. ವೀರಾಜಪೇಟೆ ತಾಲೂಕು ಪ್ರತಿನಿಧಿ ಕೃತಿ ಮಾತನಾಡಿ, ಸಿಕೆವೈಸಿ ಮಾಡಿಸಿದ ೧೪ ಅಂಕಿಗಳ ಕೋಡ್ ಆರ್ಥಿಕ ವ್ಯವಹಾರಕ್ಕೆ ಪ್ರಮುಖ ಪಾತ್ರವಹಿಸುತ್ತದೆ ಎಂದರು. ಪೊನ್ನಂಪೇಟೆ ತಾಲೂಕಿನ ಕೌನ್ಸಿಲರ್ ಅನಿಲ್, ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕಿ ಸುಪರ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.