ಕಣಿವೆ, ಫೆ. ೧೪: ಕೊಡಗು ಜಿಲ್ಲಾ ಅರೆಸೇನಾಪಡೆಯ ಮಾಜಿ ಯೋಧರ ಒಕ್ಕೂಟದ ವತಿಯಿಂದ ಪುಲ್ವಾಮದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕುಶಾಲನಗರದ ಎಪಿಸಿಎಂಎಸ್ ಸುವರ್ಣ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಗ್ರರ ಸಂಚಿಗೆ ಬಲಿಯಾದ ೪೪ ಮಂದಿ ಯೋಧರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.

ಮಾಜಿ ಸಚಿವ ಅಪ್ಪಚ್ಚು ರಂಜನ್ ಈ ಸಂದರ್ಭ ಮಾತನಾಡಿ, ಪುಲ್ವಾಮದ ಘಟನೆಯಲ್ಲಿ ಅಸುನೀಗಿದ ವೀರ ಸೇನಾನಿಗಳ ಕುಟುಂಬದೊAದಿಗೆ ಅಖಂಡ ದೇಶವಾಸಿಗಳು ಇದ್ದಾರೆ.

ಆ ಘಟನೆಯ ಬಳಿಕ ದೇಶದ ಸೈನಿಕರು ೨೫೦ ಮಂದಿ ಉಗ್ರರನ್ನು ಸದೆಬಡಿಯುವ ಮೂಲಕ ಭಾರತೀಯ ಸೈನಿಕರ ಪರಾಕ್ರಮ ತೋರಿಸಿರುವುದು ಶತ್ರು ರಾಷ್ಟçಗಳಿಗೆ ಎಚ್ಚರಿಕೆಯ ಗಂಟೆ ಎಂದರು. ಕುಶಾಲನಗರ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ದೇಶದ ಭದ್ರತೆ ಹಾಗೂ ಸುರಕ್ಷತೆಗಾಗಿ ದೇಶದ ಗಡಿಗಳನ್ನು ಕಾಯುವ ಸೈನಿಕರ ಸೇವೆ ಹಾಗೂ ತ್ಯಾಗ ಅನನ್ಯವಾದುದು ಎಂದರು.

ಉದ್ಯಮಿ ಹರಪಳ್ಳಿ ರವೀಂದ್ರ ಮಾತನಾಡಿ, ದೇಶ ಸೇವೆಗಾಗಿ ತಮ್ಮ ಇಡೀ ಸುಂದರ ಆಯಸ್ಸು ಹಾಗೂ ಭವಿಷ್ಯವನ್ನು ಪಣಕ್ಕಿಡುವ ಯೋಧರ ಸೇವೆಗೆ ಬೆಲೆ ಕಟ್ಟಲಾಗದು ಎಂದರು.

ದಿಕ್ಸೂಚಿ ಭಾಷಣಕಾರರಾಗಿದ್ದ ಕೂಡಿಗೆ ಸರ್ಕಾರಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಹಂಡ್ರAಗಿ ನಾಗರಾಜು ಮಾತನಾಡಿ, ದೇಶ ಸೇವೆಯಲ್ಲಿ ಕೃಷಿಕ, ಸೈನಿಕ ಹಾಗೂ ಶಿಕ್ಷಕನ ಪಾತ್ರ ಅಪಾರವಾದುದು ಎಂದರು.

ಕುಶಾಲನಗರದ ಹಿರಿಯ ನಾಗರಿಕ ಎಂ.ಹೆಚ್. ನಜೀರ್ ಅಹಮದ್ ಮಾತನಾಡಿ, ಹುತಾತ್ಮ ಸೈನಿಕರು ದೇಶ ಸೇವೆಗಾಗಿ ಸತ್ತು ಬದುಕಿದ್ದಾರೆ. ಆದರೆ ದೇಶದ್ರೋಹಿಗಳು, ಧರ್ಮದ್ರೋಹಿಗಳು ಬದುಕಿದ್ದರೂ ಕೂಡ ಸತ್ತಂತೆ ಎಂದರು. ಕುಶಾಲನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮಾತನಾಡಿ, ಗಡಿ ಕಾಯುವ ದೇಶದ ಸೈನಿಕ ದೇಶದ ನಿವಾಸಿಗಳ ಪಾಲಿಗೆ ಜೀವ ರಕ್ಷಕ ಎಂದರು.

ದಲಿತ ಸಂಘರ್ಷ ಸಮಿತಿಯ ಮುಖಂಡ ಕೆ.ಬಿ. ರಾಜು ಸೈನಿಕರ ಕುರಿತು ಹಾಡು ಹಾಡಿದರು. ಕೊಡಗು ಜಿಲ್ಲಾ ಅರೆಸೇನಾಪಡೆಯ ಮಾಜಿ ಯೋಧರ ಅಧ್ಯಕ್ಷತೆ ಎಂ.ಜಿ. ಯತೀಶ್, ಉಪಾಧ್ಯಕ್ಷ ಪುಲಿಯಂಡ ಚೆಂಗಪ್ಪ, ಕಾರ್ಯದರ್ಶಿ ಗಳಾದ ಎಂ.ಎನ್. ರವೀಂದ್ರ, ಬಿ.ಎನ್.ರಾಜಶೇಖರ, ಸಂಚಾಲಕ ನೂರೇರಾ ಭೀಮಯ್ಯ, ಜಿ.ಕೆ. ದಿನೇಶ ಕುಮಾರ್, ಪುಟ್ಟೇಗೌಡ, ಹರೀಶ್ ಕುಮಾರ್ ಗೌಡ ಇದ್ದರು. ಶ್ರದ್ಧಾಂಜಲಿ ಸಭೆಯ ಬಳಿಕ ಕುಶಾಲನಗರದ ಕಾರು ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಅನ್ನದಾನ ಕಾರ್ಯಕ್ರಮಕ್ಕೆ ಕುಶಾಲನಗರದ ಹಿರಿಯ ನಿವಾಸಿ ಜಿ.ಎಲ್. ನಾಗರಾಜು ಹಾಗೂ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು.