ಗೋಣಿಕೊಪ್ಪಲು, ಫೆ. ೧೪: ಕಳೆದ ೪೨ ವರ್ಷಗಳಿಂದ ತಮ್ಮ ನಿವೇಶನಗಳಿಗೆ ಹಕ್ಕುಪತ್ರಕ್ಕಾಗಿ ಎದುರು ನೋಡುತ್ತಿದ್ದ ಗೋಣಿಕೊಪ್ಪಲುವಿನ ನೂರಾರು ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡುವ ಮೂಲಕ ಹಲವು ದಶಕಗಳ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಯಶಸ್ವಿಯಾಗಿದ್ದಾರೆ.

ದಶಕಗಳ ಸಮಸ್ಯೆಗೆ ಪರಿಹಾರ ಕಲ್ಪಿಸಿದ ಹಿನ್ನೆಲೆಯಲ್ಲಿ ಗೋಣಿಕೊಪ್ಪ ನಿವಾಸಿಗಳು ಶಾಸಕ ಪೊನ್ನಣ್ಣನವರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿ ಕೃತಜ್ಞತೆ ಸಲ್ಲಿಸಿದರು. ಗೋಣಿಕೊಪ್ಪಲುವಿನ ೩ನೇ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ನಾಗರಿಕ ಗೌರವ ಸ್ವೀಕರಿಸಿದರು.

ಗೋಣಿಕೊಪ್ಪಲುವಿನ ನಿವೇಶನ ರಹಿತ ಬಡ ಜನರಿಗೆ ೪೨ ವರ್ಷಗಳ ಹಿಂದೆ ಆಗಿನ ಗ್ರಾಮ ಆಡಳಿತವು ೧ನೇ, ೨ನೇ ಹಾಗೂ ೫ನೇ ವಿಭಾಗದಲ್ಲಿ ೨೦೦ಕ್ಕೂ ಹೆಚ್ಚು ನಿವೇಶನ ರಹಿತ ಬಡ ಜನರಿಗೆ ನಿವೇಶನ ಹಂಚಿಕೆ ಮಾಡಿದ್ದರು. ಆದರೆ ಯಾರಿಗೂ ತಮ್ಮ ನಿವೇಶನದ ಹಕ್ಕು ಪತ್ರ ಇಲ್ಲಿಯ ತನಕ ನೀಡಿರಲಿಲ್ಲ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಚುನಾವಣಾ ಮುನ್ನ ಗ್ರಾಮದ ಜನತೆಗೆ ಈ ಬಗ್ಗೆ ಭರವಸೆ ನೀಡಿದ್ದರು. ಇದೀಗ ನೀಡಿದ ಭರವಸೆಯಂತೆ ವಿಶೇಷ ಆಸಕ್ತಿ ವಹಿಸಿ, ಸ್ಥಳೀಯ ಬಡ ಜನರಿಗೆ ಹಕ್ಕುಪತ್ರ ಕೊಡಿಸಲು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ನಿಸರ್ಗ ಬಡಾವಣೆಯ ೨ನೇ ವಿಭಾಗ ೩ನೇ ವಾರ್ಡ್ ನಿವಾಸಿಗಳು ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಗುಡಿಸಲು ವಾಸಿಗಳಿಗೆ ನಿವೇಶನ ಮಂಜೂರು ಮಾಡಲು ಶಾಸಕ ಎ.ಎಸ್. ಪೊನ್ನಣ್ಣರವರಿಗೆ ಮನವಿ ಸಲ್ಲಿಸಿದರು. ಗೋಣಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷೆ ಎಂ. ಮಂಜುಳಾ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಣೆಗೆ ಸಹಕರಿಸಿದ ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪಿಡಿಓ ತಿಮ್ಮಯ್ಯ, ವಕೀಲರಾದ ಕಾಶಿಯಪ್ಪ, ಸಿವಿಲ್ ಇಂಜಿನಿಯರ್ ಕಡೇಮಾಡ ಮುತ್ತಪ್ಪ, ಗ್ರಾ.ಪಂ. ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು.

ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ, ಕಾಂಗ್ರೆಸ್ ಪಕ್ಷವು ಸದಾ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಲೇ ಬರುತ್ತಿದೆ. ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಭರವಸೆಯಂತೆ ಅಧಿಕಾರ ಸ್ವೀಕಾರ ಮಾಡಿ ಕೆಲವೇ ವರ್ಷಗಳಲ್ಲಿ ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಲಾಗಿದೆ. ಇದರಿಂದ ನಿಮ್ಮ ನಿವೇಶನಗಳಿಗೆ ಅಧಿಕೃತ ದಾಖಲೆಗಳು ಒದಗಿದಂತಾಗಿದೆ. ಹಕ್ಕುಪತ್ರ ನೀಡಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿರುವುದು ಶ್ಲಾಘನೀಯ, ೪೨ ವರ್ಷಗಳ ಸಮಸ್ಯೆಗೆ ಪರಿಹಾರ ಒದಗಿಸಿದ ತೃಪ್ತಿ ನನಗಿದೆ ಎಂದರು. ಅಭಿವೃದ್ಧಿ ಕಾರ್ಯ ಕೈಗೊಂಡಾಗ ಸಹಜವಾಗಿಯೇ ಕೆಲವರಿಗೆ ಆಲಸ್ಯ ಉಂಟಾಗುತ್ತದೆ. ಇವುಗಳಿಗೆ ಮದ್ದಿಲ್ಲ. ತಮ್ಮ ಕೆಲಸವನ್ನು ಬಡವರ ಕಲ್ಯಾಣಕ್ಕಾಗಿ ಮೀಸಲಿಡುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಧರ್ಮಜ ಉತ್ತಪ್ಪ, ಸದಸ್ಯರಾದ ನೂರೆರ ಧನ್ಯ ರವೀಂದ್ರ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಡಿ. ಮುಕುಂದ, ಮಾಜಿ ಉಪಾಧ್ಯಕ್ಷ ಕೆ.ಎಂ. ತಿಮ್ಮಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ನಾಯಂದಿರ ಶಿವಾಜಿ, ಸಮಾಜ ಸೇವಕರಾದ ಕೆ.ಎಂ. ಅಜಿತ್ ಅಯ್ಯಪ್ಪ, ಗ್ರಾ.ಪಂ. ಸದಸ್ಯರಾದ ಬಿ.ಎನ್. ಪ್ರಕಾಶ್, ಧ್ಯಾನ್ ಸುಬ್ಬಯ್ಯ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಶೀದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪೊನ್ನಂಪೇಟೆ ತಾಲೂಕು ಕೆಡಿಪಿ ಸದಸ್ಯ ಟಿ.ಕೆ. ಅಬ್ದುಲ್ ಸಮ್ಮದ್ ಸ್ವಾಗತಿಸಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅಬ್ದುಲ್ ಜಲೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಟಿ.ಕೆ ಖಾಲಿದ್ ನಿರೂಪಿಸಿ, ಹಿರಿಯರಾದ ಗೋವಿಂದಪ್ಪ ವಂದಿಸಿದರು.