ಸೋಮವಾರಪೇಟೆ, ಫೆ. ೧೩: ಸಮೀಪದ ಸಿದ್ಧಲಿಂಗಪುರದ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥಸ್ವಾಮಿ ದೇವಾಲಯದಲ್ಲಿ ತಾ. ೧೫ ಮತ್ತು ೧೬ರಂದು ಮಹಾಶಿವರಾತ್ರಿ ಮಹೋತ್ಸವ ನಡೆಯಲಿದ್ದು, ಅಷ್ಟಯಾಮ ಪೂಜೆಯೊಂದಿಗೆ, ವಿಶೇಷವಾಗಿ ದೇವರಿಗೆ ೧೧೦೮ ಎಳನೀರು ಅಭಿಷೇಕ ನೆರವೇರಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.
ತಾ.೧೫ರಂದು ಬೆಳಿಗ್ಗೆ ೫ ಗಂಟೆಗೆ ಗಣಪತಿ ಹೋಮದೊಂದಿಗೆ ಶಿವರಾತ್ರಿ ಜಾತ್ರೋತ್ಸವ ಆರಂಭವಾಗಲಿದ್ದು, ನಂತರ ಶ್ರೀಮಂಜುನಾಥಸ್ವಾಮಿಗೆ ಹಾಲಿನ ಅಭಿಷೇಕದೊಂದಿಗೆ ಪ್ರಥಮಯಾಮದ ಪೂಜೆ ನಡೆಯಲಿದೆ. ಪ್ರತಿ ಮೂರು ಗಂಟೆಗೆ ಅಭಿಷೇಕಾದಿಗಳು ನಡೆಯಲಿವೆ. ೧೧೦೮ ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಜಲಾಭಿಷೇಕ, ತಾ.೧೬ರಂದು ಬೆಳಿÀಗ್ಗೆ ಭಸ್ಮಾಭಿಷೇಕ ನಡೆಯಲಿದೆ. ಪ್ರತಿಯಾಮದ ಪೂಜೆಯಲ್ಲೂ ಏಕದಶಾವರ ರುದ್ರಾಭಿಷೇಕ ಮತ್ತು ರುದ್ರಾಭಿಷೇಕ ನೆರವೇರಲಿದೆ ಎಂದು ಮಾಹಿತಿ ನೀಡಿದ್ದಾರೆ. ತಾ. ೧೬ರಂದು ಬೆಳಿಗ್ಗೆ ರುದ್ರಹೋಮ, ೯.೩೦ಕ್ಕೆ ಕಲಶಾಭಿಷೇಕ ನಂತರ ೧೦ ಗಂಟೆಗೆ ಕ್ಷೇತ್ರದ ಪ್ರಧಾನಗುರುಗಳಾದ ಶ್ರೀರಾಜೇಶ್ನಾಥ್ಜಿ ನೇತೃತ್ವದಲ್ಲಿ ಭಕ್ತಾದಿಗಳಿಗೆ ತೀರ್ಥಸ್ನಾನ ನಡೆಯಲಿದೆ. ನಂತರ ಶ್ರೀ ಮಂಜುನಾಥಸ್ವಾಮಿ ಮತ್ತು ಪರಿವಾರ ದೇವರುಗಳಿಗೆ ಮಹಾನೈವೇದ್ಯ ಮತ್ತು ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಿಸಲಾಗುವುದು ಎಂದು ಮುತ್ತಪ್ಪ ತಿಳಿಸಿದ್ದಾರೆ. ಕುಶಾಲನಗರ ಹಾಗೂ ದೇವಾಲಯದ ಭಕ್ತಾದಿಗಳಿಂದ ಭಜನೆಗಳು ನಡೆಯಲಿದೆ. ಕೊಡಗಿನ ಶಿವ ಕ್ಷೇತ್ರಗಳಲ್ಲಿ ಅಪರೂಪವಾಗಿ ಅಷ್ಟಯಾಮದ ಪೂಜೆಗಳು ಅರಸಿನಕುಪ್ಪೆಯ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಕ್ಷೇತ್ರದ ಗುರುಗಳಾದ ಶ್ರೀರಾಜೇಶ್ನಾಥ್ಜಿ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.