ಮಡಿಕೇರಿ, ಫೆ. ೧೩: ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳಿಗೆ ಕೊಡಗು ಜಿಲ್ಲಾ ಘಟಕದಿಂದ ಅಭಿನಂದನಾ ಕಾರ್ಯಕ್ರಮ ಮಡಿಕೇರಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್, ರಾಜ್ಯ ಸಂಘದ ಚುನಾವಣೆ ಸಂದರ್ಭ ಹಲವಾರು ಅಡೆತಡೆಗಳಿತ್ತು. ಚುನಾವಣೆ ರದ್ದಾಗಿದ್ದರೆ, ೧೦೩ ವರ್ಷ ಪೂರೈಸಿದ ಸಂಘ ತಟಸ್ಥವಾಗಿ ಸಂಘಟನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತಿತ್ತು ಎಂದ ಅವರು, ಮಡಿಕೇರಿಯಲ್ಲಿ ಜಿಲ್ಲಾ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಒಟ್ಟು ೨ ಲಕ್ಷ ರೂಪಾಯಿ ವೈಯಕ್ತಿಕ ನೆರವು ನೀಡುವುದಾಗಿ ಘೋಷಿಸಿದರು.

ಸಂಘದ ರಾಜ್ಯ ಪ್ರ.ಕಾರ್ಯದರ್ಶಿ ಹೆಚ್.ವಿ ಚಂದ್ರಬಾಬು ಮಾತನಾಡಿ, ಕಟ್ಟಡ ಕಾಮಗಾರಿಗೆ ಕೇಂದ್ರ ಸಮಿತಿಯಿಂದ ರೂ.೭೫ ಸಾವಿರ ಅನುದಾನದ ಜೊತೆಗೆ ವೈಯಕ್ತಿಕವಾಗಿಯೂ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಕೊಡಗು ಪುಟ್ಟ ಜಿಲ್ಲೆಯಾದರೂ, ಜಿಲ್ಲಾ ಸಮಿತಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿರುವುದು ಶ್ಲಾಘನೀಯ. ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಮಡಿಕೇರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ವೈಯಕ್ತಿಕವಾಗಿ ೧ ಲಕ್ಷ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.

ಕಟ್ಟಡ ನಿರ್ಮಾಣಕ್ಕಾಗಿ ಸಂಘದ ರಾಜ್ಯ ಕೋಶಾಧ್ಯಕ್ಷ ಕೆ.ಚಂದ್ರಬಾಬು, ಸಂಘಟನಾ ಕಾರ್ಯದರ್ಶಿಗಳಾದ ಮಹಮ್ಮದ್ ಯಜಾಸ್, ಎಂ.ರಮೇಶ್, ವೆಂಕಟೇಶ್ ರೆಡ್ಡಿ ಅವರುಗಳು ತಲಾ ರೂ. ೫೦ ಸಾವಿರ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಸಂತ್ ರೈ, ರಾಜ್ಯ ಸಂಘದ ಪದಾಧಿಕಾರಿಗಳು ಧನಸಹಾಯ ಮಾಡುವ ಭರವಸೆ ನೀಡಿದ್ದು, ಮಳೆಗಾಲ ಮುಗಿಯುವುದರ ಒಳಗಾಗಿ ನೂತನ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಐ.ಬಿ ಶಿವರಾಜ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.