ಮಡಿಕೇರಿ, ಫೆ. ೧೩: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಮೂರ್ನಾಡು ಶಾಖೆ ತಾ.೧೫ ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಆಡಳಿತ ಮಂಡಳಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪದಾಧಿಕಾರಿಗಳು, ಅಂದು ಬೆಳಿಗ್ಗೆ ಗಂಟೆ ೧೦:೩೦ಕ್ಕೆ ಮೂರ್ನಾಡು ಮುಖ್ಯರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಕಾಂಪ್ಲೆಕ್ಸ್ನಲ್ಲಿ ಶಾಖೆ ಉದ್ಘಾಟನೆಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮವು ಮೂರ್ನಾಡು ಗೌಡ ಸಮಾಜದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

೧೯೯೮ ರಲ್ಲಿ ೪೩೫ ಸದಸ್ಯರಿಂದ ಪ್ರಾರಂಭವಾದ ಈ ಸಹಕಾರ ಸಂಘದಲ್ಲಿ ಪ್ರಸ್ತುತ ೨೨,೫೦೦ ಸದಸ್ಯರಿದ್ದು, ಒಟ್ಟು ರೂ ೫.೪೩ ಕೋಟಿ ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭದ್ರತಾ ಸಾಲ, ಚಿನ್ನ ಖರೀದಿ ಸಾಲ, ಗೃಹಸಾಲ, ವಾಣಿಜ್ಯ ಕಟ್ಟಡ ಸಾಲ, ಜಮೀನು ಖರೀದಿ ಸಾಲ, ಜಮೀನು ಅಡವು ಸಾಲ, ವೇತನ ಸಾಲ, ವ್ಯಾಪಾರ ಸಾಲ ಹಾಗೂ ಜಾಮೀನು ಸಾಲಗಳನ್ನು ನೀಡಲಾಗುತ್ತಿದೆ. ಸಂಘವು ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ೨೩ ಶಾಖೆಗಳನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದೆ ಎಂಬುದಾಗಿ ಮಾಹಿತಿ ನೀಡಿದರು.

ನೂತನ ೨೪ನೇ ಮೂರ್ನಾಡು ಶಾಖೆ ಉದ್ಘಾಟನೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ನೆರವೇರಿಸಲಿದ್ದಾರೆ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಅವರುಗಳು ನೆರವೇರಿಸಲಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ. ಸಿ. ಸದಾನಂದ ಕುರುಂಜಿ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಗಣಕೀಕರಣದ ಉದ್ಘಾಟನೆಯನ್ನು ಮೂರ್ನಾಡು ವರ್ತಕರ ಸಂಘದ ಅಧ್ಯಕ್ಷರಾದ ಅರುಣ್ ಅಪ್ಪಚ್ಚು ಬಡುವಂಡ ನೆರವೇರಿಸಲಿದ್ದು, ಪ್ರಥಮ ಪಾಲುಪತ್ರ ವಿತರಣೆಯನ್ನು ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಟಿ ಹರೀಶ್ ನೆರವೇರಿಸಲಿದ್ದಾರೆ. ಪ್ರಥಮ ಠೇವಣಿಪತ್ರವನ್ನು ಕೊಡಗು ಜಿಲ್ಲೆಯ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷರಾದ ನವೀನ್ ಅಂಬೆಕಲ್ಲು ವಿತರಿಸಲಿದ್ದಾರೆ. ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಕುಶನ್ ರೈ ವಿತರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಂಬೀರAಡ ಬಿ ಕಾಳಪ್ಪ ಹಾಗೂ ವೆಂಕಟೇಶ್ವರ ಕಾಂಪ್ಲೆಕ್ಸ್ನ ಮಾಲೀಕರಾದ ಕುಂತೋಡಿರ ದೇವಯ್ಯ ಭಾಗವಹಿಸಲಿದ್ದಾರೆ ಎಂಬುದಾಗಿ ಪದಾಧಿಕಾರಿಗಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಳ್ಯ ಶಾಖೆಯ ಅಧ್ಯಕ್ಷ ಕೆ.ಸಿ.ಸದಾನಂದ ಕುರುಂಜಿ, ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಳ್ಯ ಶಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ನಿದೇರ್ಶಕರಾದ ಸದಾನಂದ ಮಾವಜಿ, ದಾಮೋದರ್ ನಾರ್ಕೋಡು, ಮಡಿಕೇರಿ ಶಾಖೆಯ ಮ್ಯಾನೇಜರ್ ಅಶೋಕ್ ಹಾಜರಿದ್ದರು.