ಮಡಿಕೇರಿ, ಫೆ. ೧೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವಿನೂತನ ಕೊಡವ ಪುಸ್ತಕ ಭಂಡಾರ ಯೋಜನೆಯ ಅಂಗವಾಗಿ ಎರಡನೇ ‘ಪುಸ್ತಕ ಪತ್ತಾಯ’ವನ್ನು ಅರೆಕಾಡುವಿನ ಕೊಡವ ಭವನದಲ್ಲಿ ಏರ್ಪಡಿಸಲಾಗಿದ್ದು, ತಾ. ೧೪ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ.

ಕೊಡವ ವೆಲ್‌ಫೇರ್ ಆ್ಯಂಡ್ ರಿಕ್ರಿಯೇಷನ್ ಅಸೋಸಿಯೇಷನ್‌ನ ನೂತನ ಕಟ್ಟಡ ಕೊಡವ ಭವನ ಉದ್ಘಾಟನೆಯ ಜೊತೆಯಲ್ಲಿ ನಡೆಯುವ ‘ಕೊಡವ ಪುಸ್ತಕ ಪತ್ತಾಯ’ ಸ್ಥಾಪನೆಯು, ಕೊಡವ ಭವನದ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಎ.ಎಸ್. ಪೊನ್ನಣ್ಣ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಎಂಎಲ್‌ಸಿ ಸುಜಾ ಕುಶಾಲಪ್ಪ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ಬೆಳೆಗಾರ ನಡಿಕೇರಿಯಂಡ ಪಿ. ಮೋಹನ್ ಮಾಚಯ್ಯ ಪಾಲ್ಗೊಳ್ಳಲಿದ್ದಾರೆ.