ಮಡಿಕೇರಿ, ಫೆ. ೧೩; ಮಡಿಕೇರಿಯ ಸಿದ್ದಾಪುರ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಶತಮಾನೋತ್ಸವ ಭವನದ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಸಹಕಾರ ಸಂಘಗಳ ನಿಬಂಧಕರು ಸಹಕಾರ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದ್ದಾರೆ.
ಅಂಬೇಡ್ಕರ್ ಭವನ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಆಡಳಿತಾಧಿಕಾರಿಯನ್ನು ನೇಮಿಸಲು ಸರಕಾರಕ್ಕೆ ಶಿಫಾರಸು ಮಾಡಲು ಕೋರಿ ಡಾ.ಬಿ.ಆರ್. ಅಂಬೇಡ್ಕರ್ ಶತಮಾನೋತ್ಸವ ನಿರ್ಮಾಣ ಸಮಿತಿಯವರು ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ಸಂಘದ ಕಾರ್ಯನಿರ್ವಹಣೆಯಲ್ಲಿನ ಲೋಪದೋಷಗಳ ಕುರಿತು ತನಿಖೆ ನಡೆಸಿ ಆಡಳಿತ ಮಂಡಳಿಯನ್ನು ಪುನರ್ ರಚಿಸಲು ಇರುವ ಕಾನೂನಿನ ಅವಕಾಶಗಳ ರೀತ್ಯಾ ಕ್ರಮ ವಹಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿತ್ತು.
ವಿಚಾರಣಾಧಿಕಾರಿಗಳು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ ೧೯೬೦ ಕಲಂ ೨೫ರಡಿ ವಿಚಾರಣೆ ಜರುಗಿಸಿ ವಿಚಾರಣಾ ವರದಿಯನ್ನು ಸಲ್ಲಸಿದ್ದು, ವಿಚಾರಣಾ ವರದಿಯನ್ವಯ ನೂನ್ಯತೆಗಳನ್ನು ಸರಿಪಡಿಸಿ ಅನುಪಾಲನಾ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಅಲ್ಲದೆ ವಿಚಾರಣಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕರ್ನಾಟಕ ಸಂಘಗಳ ಅಧಿನಿಯಮ ೧೯೬೦ ಕಲಂ೨೫ರನ್ವಯ ಕ್ರಮಬದ್ಧವಾಗಿ ಕಾರ್ಯನಿರ್ವಹಿಸದೇ ಇರುವದು, ಕಾಲ ಕಾಲಕ್ಕೆ ಲೆಕ್ಕಪತ್ರ ಮಾಡಿಸದೆ ಇರುವದು ಹಾಗೂ ಸಂಘದ ಬೈಲಾ ರೀತ್ಯಾ ಕಾಲಕಾಲಕ್ಕೆ ಚುನಾವಣೆ ನಡೆಸದೆ ಇರುವದು ವಿಚಾರಣಾ ವರದಿಯಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಗಳ ಅಧಿನಿಯಮ ೧೯೬೦ ಕಲಂ೨೭(ಎ) ರನ್ವಯ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಕೋರಿ ಸರಕಾರಕ್ಕ ಶಿಫಾರಸು ಮಾಡಲು ಸಹಕಾರ ಸಂಘಗಳ ನಿಬಂಧಕರನ್ನು ಕೋರಿದ್ದರು.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ, ಸಂಘದ ಸದಸ್ಯರ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ನೇಮಿಸಬಹುದಾಗಿದ್ದು, ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಅಧಿಕಾರ ಸರಕಾರಕ್ಕೆ ದತ್ತವಾಗಿರುವದರಿಂದ ಜಿಲ್ಲಾ ನೋಂದಣಾಧಿಕಾರಿಗಳು, ಸಹಕಾರ ಸಂಘಗಳ ಉಪನಿಬಂಧಕರುಗಳ ಕೋರಿಕೆಯನ್ನು ಪರಿಗಣಿಸಿ ಕರ್ನಾಟಕ ಸಂಘಗಳ ಅಧಿನಿಯಮ ೧೯೬೦ರ ಕಲಂ ೨೭(ಎ)ರನ್ವಯ ಡಾ.ಬಿ.ಆರ್. ಅಂಬೇಡ್ಕರ್ ಶತಮಾನೋತ್ಸವ ನಿರ್ಮಾಣ ಸಮಿತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಸಹಕಾರ ಸಂಘಗಳ ನಿಬಂಧಕರಾಗಿರುವ ಟಿ.ಹೆಚ್.ಎಂ. ಕುಮಾರ್ ಅವರು ಸಹಕಾರ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದ್ದಾರೆ. ಕಳೆದ ಡಿ.೨೪ರಂದು ಶಿಫಾರಸು ಮಾಡಿ ಪತ್ರ ಕಳುಹಿಸಿದ್ದಾರೆ.