ಮಡಿಕೇರಿ, ಫೆ. ೧೧: ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯ ಬಣ್ಣಿಸಬೇಡ ಎಂದು ಬಸವಾದಿ ಶರಣರು ಹೇಳಿದ ವಚನವೇ ಸ್ವಾತಂತ್ರö್ಯ ನಂತರ ಸಂವಿಧಾನದ ರಚಿಸಲು ಮೂಲ ಆಧಾರ. ೧೨ನೇ ಶತಮಾನದ ವಚನಗಳು ಇಂದಿಗೂ ಪ್ರಸ್ತುತ ಎಂದು ಉಪನ್ಯಾಸಕ ಕೆ.ಪಿ ಜಯಕುಮಾರ್ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡ್ಲಿಪೇಟೆಯ ಶ್ರೀ ಸದಾಶಿವ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಆರೋಡ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂಗೈಕ್ಯ ಮಾಗನೂರು ಬಸಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ದತ್ತಿ ಉಪನ್ಯಾಸ ನೀಡಿದರು.
ಶರಣರ ವಚನಗಳು ೧೨ನೇ ಶತಮಾನದಲ್ಲಿ ರಚಿತವಾಗಿದ್ದರೂ ಅವು ಇಂದಿಗೂ ಪ್ರಸ್ತುತ. ಅದರಲ್ಲಿನ ಪ್ರತಿಯೊಂದು ವಚನವು ನಮ್ಮ ಬದುಕಿಗೆ ದಾರಿದೀಪವಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್, ಕನ್ನಡ ಜನ ಜೀವನದಲ್ಲಿ ಜಾಗೃತಿಯನ್ನು ಉಂಟು ಮಾಡಿ, ಕೊಳೆಯನ್ನು ತೊಳೆದು ಹಸನಗೊಳಿಸಿ ಅರಿವನ್ನು ಮೂಡಿಸಿ ಜನರ ಬದುಕಿಗೆ ಬೆಲೆಯನ್ನು ತಂದು ಕೊಟ್ಟಂತಹ ವಚನಗಳು ನಮ್ಮ ಬದುಕಿಗೆ ದಾರಿದೀಪ ಎಂದರು.
ದಾವಣಗೆರೆಯ ಉಪನ್ಯಾಸಕ ಶಾಂತಕುಮಾರ್ ಮಾತನಾಡಿ, ಮಾಗನೂರು ಬಸಪ್ಪನವರು ವೃತ್ತಿಯಲ್ಲಿ ವ್ಯಾಪಾರಿಗಳಾಗಿದ್ದರು. ಆದರೆ ಅವರು ಅಂದಿನ ಕಾಲದಲ್ಲಿ ಸಲ್ಲಿಸಿದ ಸೇವೆ ಬಹಳಷ್ಟು ಜನರ ಬದುಕನ್ನು ಹಸನಾಗಿಸಿತ್ತು. ಹಲವಾರು ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದ ಬಸಪ್ಪನವರು ವಿದ್ಯೆಯೇ ಮಾನವನ ಅಭಿವೃದ್ಧಿಗೆ ಮೂಲ ಎಂಬುದನ್ನು ಕಂಡುಕೊAಡಿದ್ದರು. ಅಂದಿನ ಕಾಲದಲ್ಲಿಯೇ ದಾವಣಗೆರೆಯಲ್ಲಿ ವೈದ್ಯಕೀಯ ಕಾಲೇಜನ್ನು ಪ್ರಾರಂಭ ಮಾಡುವ ಮೂಲಕ ಸೇವೆಗೆದ್ದಿದ್ದರು ಎಂದು ಸ್ಮರಿಸಿದರು.
ಕಿರಿಕೊಡ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಸದಾಶಿವ ಸ್ವಾಮಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ನಮ್ಮ ದೈನಂದಿನ ಜೀವನದಲ್ಲಿ ಬಸವಾದಿ ಶರಣರ ವಚನಗಳನ್ನು ಅಳವಡಿಸಿಕೊಂಡರೆ ಎಲ್ಲರ ಬದುಕು ಹಸನಾಗುತ್ತದೆ ಎಂದರು. ಇದೇ ಸಂದರ್ಭ ಕಿರಿಕೊಡ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಸದಾಶಿವ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.
ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಪಿ ಶಾಂತಮಲ್ಲಪ್ಪ ಮಾತನಾಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಚಂದ್ರಶೇಖರ್ ನಿರೂಪಿಸಿ, ಸ್ವಾಗತಿಸಿದರು.