ಮಡಿಕೇರಿ, ಫೆ. ೧೧: ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಹಲವು ಕಾಯಕ ಶರಣರು ವರ್ಣ ವ್ಯವಸ್ಥೆ, ಜಾತಿ ಪದ್ಧತಿ, ಮೌಢ್ಯ ವಿರುದ್ಧ, ಅಜ್ಞಾನ ಹಾಗೂ ಕಂದಾಚಾರಗಳನ್ನು ಹೋಗಲಾಡಿಸಿ ಸರ್ವರಿಗೂ ಸಮಾನತೆ ತರಲು ಶ್ರಮಿಸಿದ್ದಾರೆ ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಶಿಕ್ಷಕಿ ಹೇಮಲತಾ ಬಿ.ಬಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡೊಹಾರ್ ಕಕ್ಕಯ್ಯ, ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಅವರು ವೃತ್ತಿಯ ಮೂಲಕ ಸಮಾಜದಲ್ಲಿ ಕಾಯಕವೇ ಕೈಲಾಸ ಎಂಬುದನ್ನು ಸಾರಿದ್ದಾರೆ. ಡೋಹಾರ ಕಕ್ಕಯ್ಯ ಅವರು ಹನ್ನೆರಡನೇ ಶತಮಾನದಲ್ಲಿ ಕಾಯಕ ಯೋಗಿಯಾಗಿ ವೃತ್ತಿ ಧರ್ಮವನ್ನು ಗೌರವಿಸಬೇಕು ಎಂಬುದನ್ನು ಸಾರಿದ್ದಾರೆ. ಡೋರ ಎಂದರೆ ಚರ್ಮಕಾರ ಎಂದರ್ಥ, ಚರ್ಮ ಹದ ಮಾಡುವ ಕಾಯಕ ಮಾಡುತ್ತಿದ್ದರು. ಕಲ್ಯಾಣ ಕ್ರಾಂತಿಯಲ್ಲಿ ಭಾಗವಹಿಸಿದ್ದರು. ಶರಣ ಮಾರ್ಗದ ದಿವ್ಯ ಸಾಧನೆಯ ಪರಿಪಕ್ವದ ಅಧ್ಯಾತ್ಮಿಕ ಔನತ್ಯವನ್ನು ಸಾಕ್ಷೀಕರಿಸಿದ್ದಾರೆ ಎಂದು ವಿವರಿಸಿದರು.
ಮಾದರ ಧೂಳಯ್ಯ ಅವರು ಬಸವ ಕಲ್ಯಾಣದ ಕಾಯಕ ಯೋಗಿಯಾಗಿದ್ದರು. ಕಾಯಕ ನಿಷ್ಠೆ ಮತ್ತು ಆತ್ಮಜ್ಞಾನದಿಂದ ಮಹಾಜ್ಞಾನಿಯಾಗಿ ಬೆಳೆದವರು. ಮತ್ತೊಬ್ಬ ಶರಣರು ಉರಿಲಿಂಗ ಪೆದ್ದಿ ಅವರು ವಚನಕಾರ ಮತ್ತು ಕ್ರಾಂತಿಕಾರಿ ಶರಣರಾಗಿದ್ದರು. ಸಮಗಾರ ಹರಳಯ್ಯ ಅವರು ಹನ್ನೇರಡನೇ ಶತಮಾನದ ಬಸವಣ್ಣನವರ ಸಮಕಾಲೀನ ವಚನಕಾರರಾಗಿದ್ದು, ಕಲ್ಯಾಣ ಕ್ರಾಂತಿಗೆ ಕಾರಣರಾದ ಹರಳಯ್ಯನವರ ಮಗ ಶೀಲವಂತ ಮತ್ತು ಉನ್ನತ ಸಮಾಜದ ಮಧುವರಸ ಮಗಳ ಮದುವೆಯು ಬಸವಣ್ಣನವರ ಸಮಾನತೆಯ ತತ್ವದಂತೆ ನಡೆಯಿತು. ಇದು ಕಲ್ಯಾಣದಲ್ಲಿ ನಡೆದ ಜಾತಿ, ವರ್ಣ ರಹಿತ ಸಮಾಜದ ಪ್ರಯತ್ನವಾಗಿತ್ತು ಎಂದು ಹೇಮಲತಾ ಮಾಹಿತಿ ನೀಡಿದರು.
ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಅಬ್ದುಲ್ ನಜೀಜ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕÀ ಕುಮಾರ, ಮಣಜೂರು ಮಂಜುನಾಥ್, ವನಿತಾ, ಇತರರು ಇದ್ದರು.