ಸೋಮವಾರಪೇಟೆ, ಫೆ. ೧೧ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿದಾಗ ಅದು ಕುಟುಂಬಕ್ಕೂ ಸಮಾಜಕ್ಕೂ ಬೆಳಕಾಗುತ್ತದೆ. ಶಿಕ್ಷಣವೆಂಬುದು ಯಾರಿಂದಲೂ ಕಸಿದುಕೊಳ್ಳಲಾಗದ ಶಾಶ್ವತ ಸಂಪತ್ತು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು

ಸಮೀಪದ ತೋಳುರುಶೆಟ್ಟಳ್ಳಿಯ ಹರಪಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ವಾರ್ಷಿಕೋತ್ಸವ ಹಾಗೂ ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ಅಜ್ಞಾನವು ನಮ್ಮೊಳಗೆ ಭಯವನ್ನು ಹುಟ್ಟಿಸಿದರೆ, ಭಯವು ಮತ್ತೆ ಅಜ್ಞಾನವನ್ನು ಹೆಚ್ಚಿಸುತ್ತದೆ. ಇವೆರಡನ್ನು ಒಂದೇ ಸಮಯದಲ್ಲಿ ದೂರ ಮಾಡುವ ಶಕ್ತಿ ವಿದ್ಯೆಗೆ ಮಾತ್ರ ಇದೆ. ಮಕ್ಕಳಿಗೆ ಉತ್ತಮ ವೇದಿಕೆ ಸಿಕ್ಕಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪೋಷಕರು ಸಹಕಾರಿಯಾಗಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಸಂಸ್ಕೃತಿ ಚಿಂತಕ ಪೃಥ್ವಿರಾಜ್ ಹಾಲಹಳ್ಳಿ ಮಾತನಾಡಿ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಕನಸು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ಮಗುವಿಗೂ ಕನಸ್ಸು ಗಳಿರಬೇಕು ಮತ್ತು ಆ ಕನಸುಗಳನ್ನು ಸ್ಪಷ್ಟ ಗುರಿಯಾಗಿ ರೂಪಿಸಿಕೊಂಡು ಮುನ್ನಡೆಯಬೇಕು ಎಂದರು. ಕಾಲೇಜು ವಿಭಾಗದ ಸಮನ್ವಯ ಅಧಿಕಾರಿ ಲೋಕೇಶ್ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಅತ್ಯಂತ ಮುಖ್ಯವಾಗಿದ್ದು ಅದರೊಂದಿಗೆ ಶಿಸ್ತು ಕೂಡ ಬಹಳ ಅಗತ್ಯವಾಗಿದೆ. ಶಿಕ್ಷಣದ ಜೊತೆಗೆ ಶಿಸ್ತು ಬೆಳೆಸಿಕೊಂಡಾಗ ಮಾತ್ರ ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಬೇಕು. ಜೀವನದಲ್ಲಿ ಅನೇಕ ವಸ್ತುಗಳನ್ನು ಕಸಿದುಕೊಳ್ಳಲು ಸಾಧ್ಯವಾದರೂ, ಒಮ್ಮೆ ಪಡೆದ ಶಿಕ್ಷಣವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣವೇ ಮಾನವನಿಗೆ ಶಾಶ್ವತವಾದ ಸಂಪತ್ತು ಎಂದರು

ಕಾರ್ಯಕ್ರಮದಲ್ಲಿ ಪುಷ್ಪಗಿರಿ ಎಂಬ ಸಂಚಿಕೆಯನ್ನ ಸೋಮವಾರಪೇಟೆ ಉಪ ವಿಭಾಗ ಪೋಲೀಸ್ ಉಪಾಧೀಕ್ಷ ಚಂದ್ರಶೇಖರ್ ಬಿಡುಗಡೆಗೊಳಿಸಿದರು.

ತೋಳುರುಶೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷೆ ಭವಾನಿ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕಿ ಎಸ್.ಎ.ಸಬಾನಾ ಕಾರ್ಯಕ್ರಮ ನಿರೂಪಿಸಿ, ಪೂಜಾ ವಂದಿಸಿದರು. ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ಸಾಹಿತಿ ಎಂ.ಎ. ರುಬಿನಾ, ಪೋಷಕ ಪರಿಷತ್ತಿನ ಅಧ್ಯಕ್ಷ ಬೋಪಯ್ಯ ಇದ್ದರು.