ಚೆಟ್ಟಳ್ಳಿ, ಫೆ. ೮: ಶಾಲಾ ಬಾಸ್ಕೆಟ್ ಬಾಲ್ ಕೋರ್ಟ್ನ್ನು ಕಾಫಿ ಕಣವಾಗಿ ಬಳಸಿಕೊಳ್ಳುತ್ತಿರುವುದರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದ್ದು, ಶಾಲಾ ಆಡಳಿತ ಮಂಡಳಿಯ ಮೌನ ಪ್ರಶ್ನೆಗೆ ಕಾರಣವಾಗಿದೆ. ೨೦೧೨ರಲ್ಲಿ ಚೆಟ್ಟಳ್ಳಿ ಪ್ರೌಢಶಾಲೆಗೆ ೫೦ ವರ್ಷ ಪೂರೈಸಿದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಉದ್ಯಮಿ, ಸಮಾಜಸೇವಕ ಹಾಗೂ ಹಳೆಯ ವಿದ್ಯಾರ್ಥಿ ಜಗದೀಶ್ ರೈ ಅವರು ಶಾಲೆಯ ಸಮೀಪವೇ ಸುಮಾರು ೫.೫೦ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಬಾಸ್ಕೆಟ್ಬಾಲ್ ಕೋರ್ಟ್ ನಿರ್ಮಿಸಿ ಕೊಟ್ಟಿದ್ದರು. ಇದೀಗ ಕಾಫಿ ಒಣಗಿಸುವ ಕಣವಾಗಿ ಇದು ಪರಿವರ್ತನೆಯಾಗಿದೆ.
ದೈಹಿಕ ಶಿಕ್ಷಕ ಪಿ.ಎಸ್. ಮಾಚಯ್ಯ ಅವರ ನಿವೃತ್ತಿಯ ನಂತರ ಕೋರ್ಟ್ನ ನಿರ್ವಹಣೆ ಕಡೆಗಣನೆಯಾಗಿದ್ದು, ಇದನ್ನು ದುರುಪಯೋಗಪಡಿಸಿಕೊಂಡು ಶಾಲಾ ಆಡಳಿತ ಮಂಡಳಿಗೆ ಸಂಬAಧಪಟ್ಟ ಕೆಲವರು ತಮ್ಮ ತೋಟದ ರೋಬಸ್ಟಾ ಕಾಫಿಯನ್ನು ಕೋರ್ಟ್ನಲ್ಲಿ ಒಣಗಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ದುರ್ಬಳಕೆಯಿಂದ ಕೋರ್ಟ್ನ ಸಿಮೆಂಟ್ ನೆಲ ಬಿರುಕು ಬಿಟ್ಟಿದ್ದು, ಕೆಲವೆಡೆ ಸಿಮೆಂಟ್ ಎದ್ದಿರುವುದು ಕಂಡುಬAದಿದೆ. ಇದರಿಂದ ವಿದ್ಯಾರ್ಥಿಗಳ ಕ್ರೀಡಾಭ್ಯಾಸಕ್ಕೆ ತೀವ್ರ ಅಡ್ಡಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದಾನಿ ಜಗದೀಶ್ ರೈ, ಬಡ ಮತ್ತು ಪ್ರತಿಭಾವಂತ ಮಕ್ಕಳ ಕ್ರೀಡಾ ಅಭಿವೃದ್ದಿಗಾಗಿ ನಾನು ಬಾಸ್ಕೆಟ್ಬಾಲ್ ಕೋರ್ಟ್ ನಿರ್ಮಿಸಿ ಕೊಟ್ಟಿದ್ದೇನೆ. ಆದರೆ ಶಾಲೆಯ ಮೇಲೆ ಅಭಿಮಾನವಿಲ್ಲದವರು ಇದನ್ನು ಕಾಫಿ ಒಣಗಿಸಲು ಬಳಸಿರುವುದು ಅತ್ಯಂತ ನೋವಿನ ಸಂಗತಿ. ಆಡಳಿತ ಮಂಡಳಿಯ ನಿರ್ಲಕ್ಷö್ಯ ಖಂಡನೀಯ, ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. - ಕಾಳಯ್ಯ