ನಾಪೋಕ್ಲು, ಫೆ. ೮: ನಾಪೋಕ್ಲು- ಭಾಗಮಂಡಲ ರಸ್ತೆ ದುಸ್ಥಿತಿಯ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಆಟೋ ಚಾಲಕರು, ಸಾರ್ವಜನಿಕರು ಎಮ್ಮೆಮಾಡು - ಚೋನಕೆರೆ ರಸ್ತೆಯಲ್ಲಿ ಒಂದೂವರೆ ಕಿಲೋಮೀಟರ್ ಬಾಳೆ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು.

ಹಳೆ ತಾಲೂಕಿನಿಂದ ಎಮ್ಮೆಮಾಡು ಜಂಕ್ಷನ್‌ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಆಟೋ ಚಾಲಕರು, ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಸಂಬAಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಆಟೋ ಚಾಲಕರು, ಸಾರ್ವಜನಿಕರು ಆಗ್ರಹಿಸಿದರು.

ಅವ್ಯವಸ್ಥೆ ಕುರಿತು ಅನೇಕ ಬಾರಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದರೂ ಟೆಂಡರ್ ಆಗಿದೆ, ಅನುದಾನದ ಕೊರತೆ ಇದೆ ಎನ್ನುವ ಉತ್ತರ ಬರುತ್ತಿದೆಯೇ ಹೊರತು ಅಭಿವೃದ್ಧಿ ಕಾರ್ಯ ಮಾತ್ರ ಇನ್ನೂ ಆಗಿಲ್ಲ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ತಪ್ಪಿದಲ್ಲಿ ರಸ್ತೆ ತಡೆ ನಡೆಸಿ ಸಂಚಾರ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಿರಣ್ ಕೋಟೆರಿ, ಗೌತಮ ಚೋನಕೆರೆ, ಇಬ್ರಾಹಿಂ ಕೊಟ್ಟಮುಡಿ, ಆಸಿಫ್ ಎಮ್ಮೆಮಾಡು, ಚರಣ್ ನಾಪೋಕ್ಲು, ಆಟೋ ಚಾಲಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.