ನಾಪೋಕ್ಲು, ಫೆ. ೮: ನಾವೆಲ್ಲರೂ ಒಂದೇ ಎಂಬ ಮನೋಭಾವದೊಂದಿಗೆ ದೇಶವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಹೇಳಿದರು.

ಇಲ್ಲಿಗೆ ಸಮೀಪದ ಚೆರಿಯಪರಂಬು ಉರೂಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಪಂಚದ ಹಲವೆಡೆ ಯುದ್ಧ ನಡೆಯುತ್ತಿದೆ; ಯುದ್ಧ ನಿಲ್ಲಬೇಕು. ಎಲ್ಲರೂ ಮಾನವೀಯತೆಯನ್ನು ಮೆರೆಯಬೇಕು. ಸುಖ ಶಾಂತಿ ನೆಮ್ಮದಿಯ ಸಮಾಜ ನಿರ್ಮಾಣವಾಗಬೇಕು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಾಮರಸ್ಯ ಸಾರಬೇಕು ಎಂದರು.

ಕಾರ್ಯಕ್ರಮದಲ್ಲಿ ಮಸೀದಿಯ ಆಡಳಿತ ಮಂಡಳಿ ವತಿಯಿಂದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ಮಕ್ಕಳ ದಫ್ ಕಾರ್ಯಕ್ರಮದೊಂದಿಗೆ ಪೊನ್ನಣ್ಣ ಅವರನ್ನು ಸ್ವಾಗತಿಸಲಾಯಿತು.

ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎ. ಅಹಮದ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಪೋಕ್ಲು ಪಟ್ಟಣದ ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಎ. ಇಸ್ಮಾಯಿಲ್, ಮಾಚೇಟ್ಟಿರ ಕುಸು ಕುಶಾಲಪ್ಪ, ಮಹಮ್ಮದ್ ಟಿ.ಎ. ಮಸೀದಿಯ ಖತೀಬರಾದ ಮುಹಮ್ಮದ್ ಶಫೀಕ್ ಅಲಿ , ಎಂ.ಎ. ಮನ್ಸೂರ್ ಆಲಿ, ಮಸೀದಿಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.