ಮಡಿಕೇರಿ, ಫೆ. ೮: ಬನ್ನಿ, ಬನ್ನಿ, ನಿಮಗೇನಾದರೂ ಕಡತ ಬೇಕಾಗಿದೆಯೇ? ಸಂಕೋಚವಿಲ್ಲದೆ ಈ ಕಚೇರಿಗೆ ಬನ್ನಿ, ಅಂದರೆ ಹಗಲು ಸಿಬ್ಬಂದಿ ಇದ್ದಾಗ ಮಾತ್ರವಲ್ಲ. ರಾತ್ರಿ ವೇಳೆ ಯಾರೂ ಇಲ್ಲದಿದ್ದಾಗಲೂ ನೀವು ಭಯವಿಲ್ಲದೆ ಒಳ ನುಗ್ಗಬಹುದು.
ಇದು ಎಲ್ಲಿ ಎಂದು? ಕೊಡಗಿನ ಮುಖ್ಯ ನಗರವಾದ ಮಡಿಕೇರಿಯಲ್ಲಿಯೇ ಮುಕ್ತಾವಕಾಶ ಕಲ್ಪಿಸಿದ್ದಾರೆ. ಇದೇನಿದು...ಈ ಸರಕಾರಿ ಕಚೇರಿ ಹಗಲೂ- ರಾತ್ರಿ ನಿಮ್ಮ ಸೇವೆಗೆ ತೆರೆದಿರುತ್ತದೆಯೇ? ಮಡಿಕೇರಿ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ (ಎಲ್ಐಸಿ ಕಚೇರಿ ಬಳಿ)ರುವ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ ರಾತ್ರಿಯೆಲ್ಲಾ ತೆರೆದಿರುತ್ತದೆ. ರಾತ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇದು ಖಾತರಿಗೊಂಡಿದೆ. ಬೆಲೆಬಾಳುವ ಕಂಪ್ಯೂಟರ್ಗಳು,, ಮೇಜಿನ ಮೇಲೆ ಇಟ್ಟಿರುವ ಅಮೂಲ್ಯ ದಾಖಲಾತಿಗಳು ಅನಾಥವಾಗಿ ಬಿದ್ದುಕೊಂಡಿವೆ. ಶನಿವಾರ ರಾತ್ರಿ ಬೀಗ ಹಾಕದೆ ಸಂಬAಧಿತ ಸಿಬ್ಬಂದಿ-ಅಧಿಕಾರಿ ತೆರಳಿದ್ದಾರೆ. ಭಾನುವಾರ ಕಚೇರಿಗೆ ರಜೆಯಿದ್ದುದರಿಂದ ಇತ್ತ ಯಾರೂ ಸುಳಿದಿಲ್ಲ. ಬೆಳಿಗ್ಗೆಯೂ ಬಾಗಿಲು ತೆರೆದೇ ಇತ್ತು. ಇಂತಹ ಬೇಜವಾಬ್ದಾರಿಕೆಯಿರುವವರು ಸರಕಾರೀ ಸಂಬಳ ಪಡೆದು ಸರಕಾರಕ್ಕೆ, ಜನತೆಗೆ ಹಾಗೂ ಅಂಬೇಡ್ಕರ್ ಯೋಜನೆಗಳ ಫಲಾನುಭವಿಗಳಿಗೆ ದ್ರೋಹವೆಸಗಿದಂತಲ್ಲವೇ? ಇದನ್ನು ನೋಡಿದ ನಾಗರಿಕರೊಬ್ಬರು “ಶಕ್ತಿ” ಪ್ರತಿನಿಧಿಯೊಂದಿಗೆ ಸಂಶಯಿಸಿದ್ದು ಹೀಗಿದೆ” ಹೀಗೂ ಉಂಟೇ? -ಚಿತ್ರ ವರದಿ: ಟಿ.ಜಿ. ಸತೀಶ್