ಕೊಡ್ಲಿಪೇಟೆ, ಫೆ. ೮: ೧೫೫ನೇ ವರ್ಷದ ಸಂಭ್ರಮದಲ್ಲಿರುವ ಕೊಡ್ಲಿಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿ ಈ ಭಾಗದ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಕ್ರಮ ವಹಿಸಲಾಗುವುದು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.
ಕೊಡ್ಲಿಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ೧೫೫ ವರ್ಷ ತುಂಬಿದ ನೆನಪಿಗಾಗಿ ಶಾಲಾಡಳಿತ ಮಂಡಳಿ ಮತ್ತು ಹಳೆ ವಿದ್ಯಾರ್ಥಿಗಳ ಸಂಘದಿAದ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊಡ್ಲಿಪೇಟೆ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ರೂ. ೧೦ ಲಕ್ಷ ಅನುದಾನ ಒದಗಿಸಲಾಗುವುದು. ಇದರೊಂದಿಗೆ ಕರ್ನಾಟಕ ಪಬ್ಲಕ್ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿ ಒಂದೇ ಪ್ರಾಂಗಣದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಒದಗಿಸುವ ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಹೈಕೋರ್ಟ್ನ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ನೆರವೇರಿಸಿ ಮಾತನಾಡಿ, ತಾನೂ ಕೂಡ ಇದೇ ಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸ ಪೂರೈಸಿದ್ದು, ಶಾಲೆಯು ೧೫೫ನೇ ವರ್ಷದತ್ತ ದಾಪುಗಾಲು ಹಾಕುತ್ತಿರುವುದು ಸಂತಸ ತಂದಿದೆ. ಸರ್ಕಾರಿ ಶಾಲೆಗಳು ಉಳಿಯಬೇಕು. ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಿದ್ದಾರೆ ಎಂದರು.
ಕೊಡ್ಲಿಪೇಟೆ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ವೈಯುಕ್ತಿಕವಾಗಿ ಸಹಕಾರ ನೀಡಲಾಗುವುದು. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಮುಂದಾಗಬೇಕು ಎಂದರು.
ಸಮಾರAಭದ ಸಾನ್ನಿಧ್ಯವನ್ನು ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ವಹಿಸಿದ್ದರು.
೧೫೫ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಹಳೆಯ ವಿದ್ಯಾರ್ಥಿಗಳಿಗೆ ಕ್ರೀಡೋತ್ಸವ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ಸಮಾಜದ ಪ್ರಮುಖರು, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಮುಖರನ್ನು ಸನ್ಮಾನಿಸಲಾಯಿತು. ದೊಡ್ಡಕುಂದ ಬಸ್ ನಿಲ್ದಾಣದಿಂದ ಕೊಡ್ಲಿಪೇಟೆ ಶಾಲೆಯವರೆಗೆ ಮಹಿಳೆಯರು ಕಳಸದೊಂದಿಗೆ ಮೆರವಣಿಗೆ ನಡೆಸಿದರು. ಕೊಡ್ಲಿಪೇಟೆ ಕ್ಲಸ್ಟರ್ನ ೯ ಸರ್ಕಾರಿ ಹಾಗೂ ೩ ಖಾಸಗಿ ಶಾಲೆಯ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಡಿ.ಎನ್. ವಸಂತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಅಪ್ಸರಿ ಬೇಗಂ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಬಿಗ್ಬಾಸ್ ಸೀಸನ್ ೧೨ರ ಸ್ಪರ್ಧಿ ಧೃವಂತ್, ಅಕ್ರಮಸಕ್ರಮ ಸಮಿತಿ ಸದಸ್ಯ ಜೆ.ಎಲ್. ಜನಾರ್ದನ್, ಕೆಡಿಪಿ ಸದಸ್ಯ ಔರಂಗಜೇಬ್, ವೇದಕುಮಾರ್, ಶಿಕ್ಷಣ ಸಂರಕ್ಷಣಾ ಸಮಿತಿಯ ಕೊಡಗು ಜಿಲ್ಲಾ ಸದಸ್ಯ ಮೋಹನ್ ಮೌರ್ಯ, ಪ್ರಮುಖರಾದ ಡಾ. ಉದಯ್ ಕುಮಾರ್, ಎಸ್ಡಿಎಂಸಿ ಉಪಾಧ್ಯಕ್ಷೆ ಮಮತ ರಮೇಶ್ ಸೇರಿದಂತೆ ಇತರರು ಇದ್ದರು.