ಶನಿವಾರಸಂತೆ, ಫೆ. ೬: ರಕ್ತದಾನ ಮಾಡುವುದರಿಂದ ಮನಷ್ಯನ ಆರೋಗ್ಯದ ವೃದ್ಧಿಯಾಗುತ್ತದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್ ಹೇಳಿದರು.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನದಿಂದ ರಕ್ತದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗಿ ಹೃದಯದ ಕಾರ್ಯಕ್ಷಮತೆ ಉತ್ತಮವಾಗುವುದು. ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ ಇದೆ. ಯುವಜನತೆ ನಿಯಮಿತವಾಗಿ ರಕ್ತದಾನ ಮಾಡ ಬೇಕು ಎಂದು ಕರೆ ನೀಡಿದರು.

ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಅನನ್ಯ, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಗುರುಪ್ರಸನ್ನ ಪಿಡಿಓ ಆಯಿಷಾ, ಹಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿ ಸರಸ್ವತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ಸಮುದಾಯ ಆರೋಗ್ಯ ಆಧಿಕಾರಿ ಟಿ.ಸಿ.ನಂದೀಶ್, ಸಿಬ್ಬಂದಿ ಧರಣೀಶ್, ರಾಜ್, ಆಶಾ ಕಾರ್ಯಕರ್ತೆಯರಾದ ಸಂಧ್ಯಾ, ನಂದಿನಿ, ಸೌಮ್ಯಾ, ಉಷಾ, ಸೌಮ್ಯ ರಮೇಶ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. ಶಿಬಿರದಲ್ಲಿ ಒಟ್ಟು ೩೪ ಮಂದಿ ರಕ್ತದಾನ ಮಾಡಿದರು.