ಭಾಗಮಂಡಲ, ಫೆ. ೫: ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಎ.ಎಸ್ ಪೊನ್ನಣ್ಣ ಅಭಿಪ್ರಾಯಪಟ್ಟರು.
ಭಾಗಮಂಡಲ ಸಮೀಪದ ಚೆಟ್ಟಿಮಾನಿಯ ಸಾಂದೀಪನಿ ವಿದ್ಯಾಪೀಠದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರ ಪ್ರದೇಶದಲ್ಲಿ ಶಿಕ್ಷಣ ನೀಡುವುದು ಇಂದು ವ್ಯಾಪಾರೀಕರಣವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣವನ್ನು, ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸೇವಾ ಮನೋಭಾವನೆ ಇದ್ದರೆ ಮಾತ್ರ ಸಾಧ್ಯ. ಭಾಗಮಂಡಲ ಚೆಟ್ಟಿಮಾನಿ ಭಾಗದಲ್ಲಿ ಸಾಂದೀಪನಿ ವಿದ್ಯಾಪೀಠವನ್ನು ಸ್ಥಾಪಿಸಿ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಸೇವಾ ಮನೋಭಾವದ ವ್ಯಕ್ತಿಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿರುವುದು ಸಂತಸದ ವಿಷಯ. ಇದು ದೇಶಕ್ಕೆ ಮಾಡಿದ ಸೇವೆ ಎಂದು ಶ್ಲಾಘಿಸಿದರು. ಶಾಸಕ ಮಂತರ್ ಗೌಡ ಮಾತನಾಡಿ, ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಪರೀಕ್ಷೆಯಿಂದ ಅಳೆಯಲು ಸಾಧ್ಯವಿಲ್ಲ. ಪರೀಕ್ಷೆಯಲ್ಲಿ ಅಂಕ ಗಳಿಸುವುದು ಅಷ್ಟೇ ಶಿಕ್ಷಣವಲ್ಲ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಪ್ರಗತಿ ಸಾಧಿಸಬೇಕು. ಪೋಷಕರು ಇಂದು ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ನೇಹಿತನಂತೆ ಕಾಣಬೇಕು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮ ಅಗತ್ಯ. ಮಕ್ಕಳನ್ನು ಧನಾತ್ಮಕವಾಗಿ ಪ್ರೋತ್ಸಾಹಿಸಿದರೆ ಮಾತ್ರ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದಂತಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಮಾತನಾಡಿ, ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯುವುದು ಎಲ್ಲರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ. ಪ್ರಾಥಮಿಕ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಗುಣ ಕಲಿಸಿಕೊಡಬೇಕು. ಸಮಾಜದ ಬೆಳವಣಿಗೆಗೆ ಕನಸು ಕಾಣುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಮಕ್ಕಳ ಕನಸನ್ನು ಸಾಕಾರಗೊಳಿಸಲು ಶಿಕ್ಷಕರು ಮುಂದಾಗಬೇಕು ಎಂದರು. ಸಾಂದೀಪನಿ ವಿದ್ಯಾಪೀಠದ ಅಧ್ಯಕ್ಷ ಕೆ.ಜಿ ರಘುನಾಥ್, ಕಾರ್ಯದರ್ಶಿ ಕೆ.ಆರ್ ಯೋಗೇಶ್, ಮುಖ್ಯೋಪಾಧ್ಯಾಯರಾದ ಸೌಜನ್ಯ ಯೋಗೇಶ್, ಶಾಲಾ ಆಡಳಿತ ಮಂಡಳಿ ನಿರ್ದೇಶಕ ಗೌತಮ್ ನಾಣಯ್ಯ, ಮುಕ್ಕಾಟಿ ಮನೋಜ್, ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊಡನೋಳನ ದಿನೇಶ್, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಕರ ಮನಸೂರೆಗೊಂಡಿತು.