ವೀರಾಜಪೇಟೆ, ಫೆ. ೫: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಮತ್ತು ಕಾಲೇಜು ಉಪನ್ಯಾಸಕರುಗಳು ಪೊಲೀಸರೊಂದಿಗೆ ಸಹಕಾರ ನೀಡುವಂತಾಗಬೇಕು ಎಂದು ವೀರಾಜಪೇಟೆ ಡಿ.ವೈ.ಎಸ್.ಪಿ. ಮಹೇಶ್ ಕುಮಾರ್ ಹೇಳಿದರು.
ವೀರಾಜಪೇಟೆ ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವೃತ್ತ ನಿರೀಕ್ಷಕರ ಕಚೇರಿ ಸಭಾಂಗಣದಲ್ಲಿ ತಾಲೂಕಿನ ಶಾಲಾ ಮತ್ತು ಕಾಲೇಜುಗಳ ಮುಖ್ಯಸ್ಥರುಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಾದಕ ವಸ್ತು ಮನುಷ್ಯನಿಗೆ ಹಾನಿಕರ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಸೇವನೆ ಮಾಡಬಾರದು. ಗಾಂಜಾ ಇತ್ಯಾದಿ ಮಾದಕ ವಸ್ತುಗಳನ್ನು ಮಾರಾಟ ಮಾಡುವುದಾಗಲಿ, ಸೇವನೆ ಮಾಡುವುದು ಅಪರಾದ. ಇದರ ಬಗ್ಗೆ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಿಕ್ಷಕರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದರು.
ವಾಹನ ಚಾಲನೆ ಮಾಡುವಾಗ ಸಂಚಾರ ಪ್ರಜ್ಞೆ ಇರಬೇಕು. ವಾಹನ ಮಾಲೀಕರು ೧೮ ವರ್ಷದೊಳಗಿನ ಮಕ್ಕಳಿಗೆ ವಾಹನವನ್ನು ನೀಡಿ ಚಾಲನೆ ಮಾಡುವುದು ಕಂಡಲ್ಲಿ ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು. ಪ್ರತಿಯೊಬ್ಬರು ಸಂಚಾರ ನಿಯಮವನ್ನು ಪಾಲಿಸುವಂತಾಗಬೇಕು ಎಂದು ಹೇಳಿದರು. ಸಭೆಯನ್ನುದ್ದೇಶಿಸಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿದರು. ವೇದಿಕೆಯಲ್ಲಿ ನಗರ ಹಾಗೂ ಗ್ರಾಮಾಂತರ ಠಾಣಾಧಿಕಾರಿಗಳಾದ ಎಚ್.ಎಸ್ ಪ್ರಮೋದ್ ಮತ್ತು ಲತಾ, ವಾಣಿಶ್ರೀ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಿನ ಶಾಲಾ ಕಾಲೇಜು ಮುಖ್ಯಸ್ಥರು ಭಾಗವಹಿಸಿದ್ದರು.