ಮಡಿಕೇರಿ, ಫೆ. ೫: ಕೊಡಗಿನ ಮುಸ್ಲಿಂ ಸಮಾಜದ ಬಡ ಕುಟುಂಬಗಳ ಹೆಣ್ಣು ಮಕ್ಕಳ ಉಚಿತ ವಿವಾಹ ನಡೆಸಿಕೊಡುವ ಮೂಲಕ ಬಡವರಿಗೆ ನೆರವಾಗುವ ಗುರಿಯೊಂದಿಗೆ ಅಸ್ತಿತ್ವಕ್ಕೆ ಬಂದ ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯು ಕಳೆದ ೨೪ ವರ್ಷಗಳ ನಿರಂತರ ಸೇವಾ ಅವಧಿಯಲ್ಲಿ ೪೮೫ ಅರ್ಹ ಬಡ ಹಾಗೂ ಅನಾಥ ಹೆಣ್ಣು ಮಕ್ಕಳಿಗೆ ಮಾಂಗಲ್ಯ ಭಾಗ್ಯವನ್ನು ಕಲ್ಪಿಸಿಕೊಟ್ಟ ಕೀರ್ತಿಗೆ ಪಾತ್ರವಾಗಿದೆ.

೨೪ನೇ ವರ್ಷದ ಸಾಮೂಹಿಕ ವಿವಾಹ ಭಾನುವಾರ ಸುಂಟಿಕೊಪ್ಪದ ಎಸ್.ಎಸ್.ಎಲ್ ನಲ್ಲಿ ನಡೆದಿದ್ದು, ಮಾಜಿ ಸಚಿವ ಸಿಎಂ ಇಬ್ರಾಹಿಂ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಕೊಡಗು ಜಿಲ್ಲಾ ಖಾಝಿ ಎಂ.ಎA. ಅಬ್ದುಲ್ಲ ಫೈಝಿ ಮುಂತಾದ ಗಣ್ಯರು ಪಾಲ್ಗೊಳ್ಳುವ ಮೂಲಕ ಜಿಲ್ಲೆಯ ವಿವಿಧೆಡೆಗಳ ೧೧ ಬಡಕನ್ಯೆಯರ ವಿವಾಹಕ್ಕೆ ಸಾಕ್ಷಿಯಾದರು. ಅಲ್ ಅಮೀನ್ ಸಂಸ್ಥೆಯ ಸಮಾಜ ಸೇವೆಯನ್ನು ಶ್ಲಾಘಿಸಿದÀ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು, ಮುಂದಿನ ವರ್ಷ ಅಲ್ ಅಮೀನ್ ನಡೆಸುವ ಬಡವರ ಕಲ್ಯಾಣಕ್ಕೆ ತಾವು ರೂ. ೫ ಲಕ್ಷ ಕೊಡುಗೆ ನೀಡುವುದಾಗಿ ಘೋಷಿಸಿ ವಧು-ವರರಿಗೆ ಶುಭ ಹಾರೈಸಿದರು.

ಇದೇ ಸಂದರ್ಭ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಅವರು, ನೂತನ ವಧು-ವರರು ಬಾಳಿನ ಉದ್ದಕ್ಕೂ ಅನ್ಯೋನ್ಯವಾಗಿ ಪರಸ್ಪರ ಅರಿತು ಜೀವಿಸುವಂತೆ ಕಿವಿಮಾತು ಹೇಳಿದರಲ್ಲದೆ, ಜಿಲ್ಲೆಯಲ್ಲಿ ಬಡ ಹೆಣ್ಣು ಮಕ್ಕಳ ವಿವಾಹವನ್ನು ಪ್ರತಿವರ್ಷ ದೊಡ್ಡ ಮಟ್ಟದಲ್ಲಿ ಉಚಿತವಾಗಿ ನಡೆಸಿ ಕೊಡುತ್ತಿರುವ ಅಲ್ ಅಮೀನ್ ಸಂಸ್ಥೆಯ ಸಮಾಜ ಸೇವೆಗೆ ಮುಂದಿನ ಬಾರಿ ತಾವು ಎರಡೂವರೆ ಲಕ್ಷ ರೂಪಾಯಿಗಳ ಕೊಡುಗೆ ನೀಡುವುದಾಗಿ ಭರವಸೆಯಿತ್ತರು.

ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಯ್ಯದ್ ಶರ್ಫುದ್ದೀನ್ ತಂಙಳ್ ಕುಂಬೋಲ್ ಉದ್ಘಾಟಿಸಿ, ಪ್ರಥಮ “ನಿಖಾ”ಅನ್ನು ನೆರವೇರಿಸಿದರು. ಅಲ್ ಅಮೀನ್ ಸಂಸ್ಥೆಯ ಅಧ್ಯಕ್ಷ ಬಿ.ಎಚ್ ಅಹಮದ್ ಹಾಜಿ, ಕೆ.ಎ ಯಾಕೂಬ್ ಬಜೆಗುಂಡಿ, ಬಶೀರ್ ಹಾಜಿ ಗೋಣಿಕೊಪ್ಪಲು, ಹಮೀದ್ ಮುಸ್ಲಿಯಾರ್ ಸುಂಟಿಕೊಪ್ಪ, ಸೋಮವಾರಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎ ಆದಂ, ಬಾಪು ಹಾಜಿ ಕೊಡಗರಹಳ್ಳಿ, ಉದ್ಯಮಿ ಎಂ.ಎA ಸಾಹಿರ್ ಸುಂಟಿಕೊಪ್ಪ, ಅಲ್ ಅಮೀನ್ ಸಂಸ್ಥೆಯ ಖಜಾಂಚಿ ಲತೀಫ್ ಹಾಜಿ ಮುಂತಾದವರು ಉಪಸ್ಥಿತರಿದ್ದರು. ನೂತನ ವಧು-ವರರನ್ನು ಆಶೀರ್ವದಿಸಲು ಜಿಲ್ಲೆಯ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ಬಾಂಧವರು ನೆರೆದಿದ್ದರು.