ಮಡಿಕೇರಿ, ಫೆ. ೫: ಜ್ಞಾನ ಜ್ಯೋತಿ ವಿದ್ಯಾಸಂಸ್ಥೆ ವತಿಯಿಂದ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ವೀರಾಜಪೇಟೆಯ ಮಲೆತಿರಿಕೆ ಬೆಟ್ಟಕ್ಕೆ ಚಾರಣ ಆಯೋಜಿಸಲಾಗಿತ್ತು. ಚಾರಣಕ್ಕೆ ಶಾಲೆಯ ಪ್ರಾಂಶುಪಾಲರಾದ ಶಿಲ್ಪಾ ಪೊನ್ನಮ್ಮ ಅಧಿಕೃತವಾಗಿ ಚಾಲನೆ ನೀಡಿದರು.
ಚಾರಣವು ಹಿಮಾಲಯನ್ ವುಡ್ ಬ್ಯಾಡ್ಜ್ ಪಡೆದಿರುವ ಅನುಭವಿ ಮಾರ್ಗದರ್ಶಕರಾದ ಗುಲ್ಶನ್ ಟಿ.ಸಿ. ಅವರ ಮಾರ್ಗದರ್ಶನದಲ್ಲಿ ನಡೆಯಿತು. ಸ್ಕೌಟ್ ಶಿಕ್ಷಕಿ ಸ್ವರ್ಣಲತಾ ಹಾಗೂ ಗೈಡ್ ಶಿಕ್ಷಕಿ ಸುನೀತಾ.ಎಂ ಅವರು ಮಕ್ಕಳಿಗೆ ನಿರಂತರ ಮಾರ್ಗದರ್ಶನ ಹಾಗೂ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಚಾರಣ ಸಂದರ್ಭ ಮಕ್ಕಳು ಪ್ರಕೃತಿಯ ಸೌಂದರ್ಯವನ್ನು ಆನಂದಿಸುವುದರ ಜೊತೆಗೆ ಶಾರೀರಿಕ ಸಹನಶಕ್ತಿ, ಧೈರ್ಯ, ಶಿಸ್ತು ಮತ್ತು ತಂಡ ಮನೋಭಾವವನ್ನು ಕಲಿತುಕೊಂಡರು.
ಚಾರಣದ ನಂತರ ಸ್ಕೌಟ್ಸ್ ಮತ್ತು ಗೈಡ್ಸ್ ಬ್ಯಾಡ್ಜಿಂಗ್ ಸಮಾರಂಭವನ್ನು ಆಯೋಜಿಸಲಾಗಿತ್ತು. ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಅಧ್ಯಕ್ಷೆ ಹರಿಣಿ ವಿಜಯ್, ಪದಾಧಿಕಾರಿ ಸೂರಜ್ ಹಾಗೂ ಕೋಶಾಧಿಕಾರಿ ಚಂದ್ರಶೇಖರ್ ಅವರ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಿತು. ಮಕ್ಕಳ ಸಾಧನೆಯನ್ನು ಗುರುತಿಸಿ ಅವರಿಗೆ ಬ್ಯಾಡ್ಜ್ಗಳನ್ನು ವಿತರಿಸಲಾಯಿತು.