ಮಡಿಕೇರಿ, ಫೆ. ೫: ಸರ್ಕಾರದ ಪ್ರಮುಖ ಗ್ಯಾರಂಟಿಯಲ್ಲಿ ಒಂದಾದ ಯುವನಿಧಿ ಯೋಜನೆಯು ಜಾರಿಗೊಂಡು ಕಳೆದ ಡಿಸೆಂಬರ್ ತಿಂಗಳಿಗೆ ಎರಡು ವರ್ಷ ಪೂರ್ಣಗೊಂಡಿದೆ.

೨೦೨೬ ಜನವರಿ ಅಂತ್ಯಕ್ಕೆ ಒಟ್ಟು ೨,೧೧೬ ಮಂದಿ ಹೆಸರು ನೋಂದಾಯಿಸಿದ್ದು, ಇವರಲ್ಲಿ ೨,೦೭೯ ಪದವಿ ಮತ್ತು ೩೭ ಮಂದಿ ಡಿಪ್ಲೋಮಾ ಪದವೀದರರು ಒಳಗೊಂಡಿದ್ದಾರೆ. ಹಾಗೆಯೇ ಇವರಲ್ಲಿ ೮೭೭ ಯುವಕರು ಹಾಗೂ ೧,೨೩೯ ಮಂದಿ ಯುವತಿಯರು ಹೆಸರು ನೋಂದಾಯಿಸಿದ್ದಾರೆ. ಹೆಸರು ನೋಂದಾಯಿತ ೨,೧೧೬ ಯುವ ಜನರಲ್ಲಿ ೧,೬೪೯ ಮಂದಿಗೆ ಡಿಬಿಟಿ ಮೂಲಕ ಪ್ರತಿ ತಿಂಗಳು ಹಣ ಪಾವತಿಯಾಗುತ್ತಿದೆ ಎಂಬುದಾಗಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಮಡಿಕೇರಿ ತಾಲೂಕಿನ ೫೭೫ ಮಂದಿ ಹೆಸರು ನೋಂದಾಯಿಸಿದ್ದಾರೆ. ಕುಶಾಲನಗರ ೩೩೯, ಪೊನ್ನಂಪೇಟೆ ೨೩೭, ವೀರಾಜಪೇಟೆ ೩೫೬ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ೬೦೯ ಮಂದಿ ಹೆಸರು ನೋಂದಾಯಿಸಿದ್ದಾರೆ.

ಮಡಿಕೇರಿ ತಾಲೂಕಿನ ೪೪೩ ಮಂದಿ, ಕುಶಾಲನಗರ ೨೭೨, ಪೊನ್ನಂಪೇಟೆ ೧೭೨, ಸೋಮವಾರಪೇಟೆ ೪೮೦ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ೨೮೨ ಮಂದಿಗೆ ಸೇರಿ ಒಟ್ಟು ೧,೬೪೯ ಮಂದಿಗೆ ಯುವನಿಧಿ ಯೋಜನೆ ಸೌಲಭ್ಯ ದೊರೆಯುತ್ತಿದೆ ಎಂದು ಮಂಜುನಾಥ್ ಅವರು ತಿಳಿಸಿದ್ದಾರೆ.

ಯೋಜನೆಯಡಿ ಪ್ರತಿ ತಿಂಗಳು ನಿರುದ್ಯೋಗಿ ಪದವೀದರರಿಗೆ ರೂ. ೩ ಸಾವಿರ ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ.೧,೫೦೦ ನ್ನುö ೨ ವರ್ಷಗಳವರೆಗೆ ನೀಡಲಾಗುತ್ತದೆ.

೨೦೨೩ ರಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು, ಪದವಿ ಡಿಪ್ಲೋಮಾ ನಂತರ ಕನಿಷ್ಟ ೬ ತಿಂಗಳವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವವರು, ರಾಜ್ಯದಲ್ಲಿ ವಾಸವಿರುವ ಕನಿಷ್ಟ ೬ ವರ್ಷದವರೆಗೆ ಪದವಿ, ಡಿಪ್ಲೋಮಾ ಉತ್ತೀರ್ಣರಾದವರು ಯುವನಿಧಿ ಸೌಲಭ್ಯ ಪಡೆಯಲು ಅರ್ಹರಿದ್ದಾರೆ.

ಹೆಸರು ನೋಂದಾಯಿಸಿಕೊಳ್ಳಲು ಸೇವಾ ಸಿಂಧು ಪೋರ್ಟಲ್ hಣಣಠಿ://sevಚಿsiಟಿಜhugs.ಞಚಿಡಿಟಿಚಿಣಚಿಞಚಿ.gov.iಟಿ ಗೆ ಭೇಟಿ ನೀಡಿ ಹಾಗೂ ಉಚಿತವಾಗಿ ಕರ್ನಾಟಕ ಒನ್, ಗ್ರಾಮ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಅರ್ಜಿ ಸಲ್ಲಿಸಬಹುದು.

‘ಸೇವಾ ಸಿಂಧು ಪೋರ್ಟಲ್ ಮುಖಪುಟದಲ್ಲಿರುವ ನ್ಯಾಡ್ ಲಿಂಕ್’ ಉಪಯೋಗಿಸಿಕೊಂಡು ತಮ್ಮ ದಾಖಲೆಗಳು ಅಪ್‌ಲೋಡ್ ಆಗುವುದನ್ನು ಖಚಿತಪಡಿಸಿಕೊಳ್ಳಬಹುದು. ಮಾಹಿತಿಗೆ ಸಹಾಯವಾಣಿ ಸಂಖ್ಯೆ ೧೮೦೦೫೯೯೯೯೧೮ ಗೆ ಕರೆ ಮಾಡಬಹುದು ಎಂದು ಮಂಜುನಾಥ್ ತಿಳಿಸಿದ್ದಾರೆ.