ಕೂಡಿಗೆ, ಫೆ. ೪: ಕುಶಾಲನಗರ ತಾಲೂಕು ವ್ಯಾಪ್ತಿಯ ಅನೇಕ ರೈತರು ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲು ಈಗಾಗಲೇ ಭೂಮಿಯ ಸಿದ್ದತೆಯ ಜೊತೆಯಲ್ಲಿ ಶುಂಠಿಗೆ ಯಾವುದೇ ರೋಗಗಳು ಬಾರದಂತೆ ಮುನ್ನೆಚ್ಚರಿಕೆಯಾಗಿ ಔಷಧಿಗಳನ್ನು ಸಿಂಪಡಿಸುವಲ್ಲಿ ತೊಡಗಿದ್ದಾರೆ. ಜನವರಿ ತಿಂಗಳ ಕೊನೆಯ ವಾರ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ಸಿದ್ದತೆಗೊಂಡಿರುವ ಭೂಮಿಗೆ ಶುಂಠಿ ಬೇಸಾಯ ಮಾಡಿದರೆ, ಮಳೆಗಾಲ ಆರಂಭವಾಗುವಷ್ಟರಲ್ಲಿ ಶುಂಠಿ ಬೆಳೆಯು ಸಾಧಾರಣ ಮಟ್ಟಕ್ಕೆ ಬೆಳೆಯುತ್ತದೆ ಎಂದು ಪ್ರಗತಿಪರ ಶುಂಠಿ ಬೆಳೆಗಾರ ರೈತರು ಅಭಿಪ್ರಾಯಿಸಿದ್ದು, ಬಿತ್ತನೆ ಕಾರ್ಯಕ್ಕೆ ಸಿದ್ದತೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಶುಂಠಿ ಬೆಳೆಯನ್ನು ಬೆಳೆದೆ ಜಿಲ್ಲೆಯ ನೂರಾರು ರೈತರಿಗೆ ಶುಂಠಿ ಬೆಲೆಯಲ್ಲಿ ಏರಿಳಿತ ನಡುವೆ ಮಾರಾಟ ಮಾಡಿದ್ದರು. ಬೆಳೆಗಾರರು ಖರ್ಚು ಮಾಡಿದಷ್ಟು ಹಣ ಬರದಿದ್ದರೂ ಸಹ ವಾಣಿಜ್ಯ ಬೆಳೆಯಾಗಿರುವ ಹಿನ್ನೆಲೆ ತಾಲೂಕು ವ್ಯಾಪ್ತಿಯ ನೂರಾರು ರೈತರು ಬಿತ್ತನೆ ಮಾಡಲು ಸಿದ್ದರಾಗಿದ್ದಾರೆ.

ಹೊರ ಜಿಲ್ಲೆಗಳಿಂದ ಹೊಲದ ಶುಂಠಿ, ಬಯಲು ಪ್ರದೇಶ ಬಿತ್ತನೆಗೆ ಯೋಗ್ಯವಾದ ಶುಂಠಿಯನ್ನು ಅಧಿಕ ಬೆಲೆಯನ್ನು ನೀಡಿ ಖರೀದಿ ಮಾಡಿ ತಂದು ಬಿತ್ತನೆ ಮಾಡುತ್ತಿದ್ದಾರೆ.

ತಾಲೂಕು ವ್ಯಾಪ್ತಿಯಲ್ಲಿ ನೂರಾರು ರೈತರು ಈಗಾಗಲೇ ಭೂಮಿಯನ್ನು ಉಳುಮೆ ಮಾಡಿ ಅದಕ್ಕೆ ಸಂಬAಧಿಸಿದ ಸಗಣಿ ಗೊಬ್ಬರ, ಸಾವಯವ ಗೊಬ್ಬರ, ಮಣ್ಣಿನ ಸವಕಳಿ ಅನುಗುಣವಾಗಿ ಸುಣ್ಣ ಸೇರಿದಂತೆ ರೋಗ ನಿರೋಧಕ ಶಕ್ತಿ ಪುಡಿಗಳನ್ನು ಹರಡಿದ್ದಾರೆ.

ಕೂಡಿಗೆ, ಸೀಗೆಹೊಸೂರು, ತೊರೆನೂರು, ಹೆಬ್ಬಾಲೆ, ಮರೂರು, ಸಿದ್ದಲಿಂಗಪುರ, ಅಳುವಾರ, ಹುದುಗೂರು, ಬಾಣವಾರ, ಶಿರಂಗಾಲ ಸೇರಿದಂತೆ ೧೦೦ಕ್ಕೂ ಹೆಚ್ಚು ಗ್ರಾಮದ ಪ್ರಗತಿಪರ ರೈತರು ಕಳೆದ ಸಾಲಿನಲ್ಲಿ ಶುಂಠಿಗೆ ಬೆಲೆ ಕಡಿಮೆಯಾಗಿದ್ದರೂ ೧೫ ವರ್ಷಗಳಿಂದಲೂ ಶುಂಠಿ ಬೇಸಾಯ ಮಾಡುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿಯೂ ಶುಂಠಿ ಬೇಸಾಯ ಮಾಡುತ್ತೇವೆ ಎಂದು ಪಟ್ಟು ಹಿಡಿದು ಬಿತ್ತನೆಗೆ ಸಿದ್ಧ ಮಾಡುತ್ತಿದ್ದಾರೆ.