ಕೂಡಿಗೆ, ಫೆ. ೪: ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ: ಇನ್‌ಫರ್ಮೇಶನ್ ಅಂಡ್ ಕಮ್ಮೂನಿಕೇಶನ್ :) ರಾಷ್ಟಿçÃಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರೂ ಆದ ಸೋಮವಾರಪೇಟೆ ತಾಲೂಕು ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ ಇಂಗ್ಲೀಷ್ ಭಾಷಾ ಶಿಕ್ಷಕ ವಿಕ್ರಾಂತ್ ಕೇಳ್ಕರ್ ಅವರು ಎಸ್.ಎಸ್.ಎಲ್.ಸಿ. ಇಂಗ್ಲೀಷ್ ಪರೀಕ್ಷೆಯ ಫಲಿತಾಂಶ ಅಭಿವೃದ್ಧಿಗಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಸರಳ ವಿಧಾನದಲ್ಲಿ ಸಿದ್ಧಪಡಿಸಿರುವ ಇ-ಮೇಜಿನೇಟೆಡ್ ಲೆಸನ್ಸ್ ಎಸ್.ಎಸ್.ಎಲ್.ಸಿ. ಇಂಗ್ಲೀಷ್ ಪಾಠಗಳು ನನ್ನ ಕಲ್ಪನೆಯಂತೆ ಎಂಬ ಆಂಗ್ಲಭಾಷಾ ಕಲಿಕಾ ಪುಸ್ತಕವನ್ನು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಡಯಟ್ ಸಂಸ್ಥೆಯ ಪ್ರಾಂಶುಪಾಲರೂ ಆದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಅಭಿವೃದ್ಧಿ) ರಾಮಚಂದ್ರರಾಜೇ ಅರಸ್ ಬಿಡುಗಡೆಗೊಳಿಸಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್, ಗ್ರಾಮಾಂತರ ಪ್ರದೇಶ ಹಾಗೂ ಕನ್ನಡ ಮಾಧ್ಯಮದ ಕೆಲವು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎನಿಸಿರುವ ಇಂಗ್ಲೀಷ್ ಭಾಷಾ ಕಲಿಕೆಯನ್ನು ಉತ್ತಮಪಡಿಸಲು ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ ಇಂಗ್ಲೀಷ್ ಭಾಷಾ ಶಿಕ್ಷಕ ವಿಕ್ರಾಂತ್ ಕೇಳ್ಕರ್ ಸಿದ್ಧಪಡಿಸಿರುವ ಈ ಪುಸ್ತಕವು ಕಲಿಕೆಯಲ್ಲಿ ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ಕಲಿಕೆಯಲ್ಲಿ ಆಗುತ್ತಿರುವ ಕ್ಲಿಷ್ಟತೆ ನಿವಾರಿಸಲು ಪಾಠಗಳು ಸುಲಭವಾಗಿ ಅರ್ಥವಾಗುವಂತೆ ಮಾಡಲು ಸಹಕಾರಿಯಾಗಿದೆ ಎಂದರು.
ಪುಸ್ತಕ ರಚಿಸಿದ ಶಿಕ್ಷಕ ವಿಕ್ರಾಂತ್ ಕೇಳ್ಕರ್ ಮಾತನಾಡಿ, ತಾವು ಇಂಗ್ಲೀಷ್ ಬೋಧನೆಯ ಸಂದರ್ಭದಲ್ಲಿ ಮಕ್ಕಳು ಕಲಿಕೆಯಲ್ಲಿ ನಿಧಾನಗತಿಯಲ್ಲಿದ್ದುದನ್ನು ಗಮನಿಸಿ ಇಂತಹ ಮಕ್ಕಳು ಇಂಗ್ಲೀಷ್ ಭಾಷೆಯನ್ನು ಸರಳವಾಗಿ ಕಲಿತು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಆತ್ಮವಿಶ್ವಾಸ ಬೆಳೆಸುವ ದಿಸೆಯಲ್ಲಿ ವಿದ್ಯಾರ್ಥಿ ಕೇಂದ್ರಿತ ಪುಸ್ತಕವನ್ನು ಹೊರತರಲಾಗಿದೆ ಎಂದರು.
ಈ ಸಂದರ್ಭ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಎನ್.ವಿ. ಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಶಿಕ್ಷಕರ ಸಂಘಟನೆಯ ಪ್ರಮುಖರಾದ ಪೊನ್ನಚ್ಚನ ಶ್ರೀನಿವಾಸ್, ಯಶವಂತ್, ಪೂರ್ಣೇಶ್, ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್, ಜಿಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಪಾಲ್ಗೊಂಡಿದ್ದರು.