ಚೆಟ್ಟಳ್ಳಿ, ಫೆ. ೪: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶೇಷಚೇತನರ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿಂಧೂರಾಜನ್ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಪ ಬಿ.ಎಂ, ಪುನರ್ವಸತಿ ಕಾರ್ಯಕರ್ತೆ, ವಿಶೇಷಚೇತನರು, ಸಾರ್ವಜನಿಕರು ಹಾಗೂ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.

ಸಭೆಯಲ್ಲಿ ವಿಶೇಷಚೇತನರ ಸಮಸ್ಯೆಗಳು, ಸರ್ಕಾರದ ಸೌಲಭ್ಯಗಳು ಹಾಗೂ ಅನುದಾನ ಬಳಕೆಯ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಕೀರ್ ಅಬ್ದುಲ್ಲ ಅವರು, ವಿಶೇಷಚೇತನರಿಗೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಶೇ.೫ರಷ್ಟು ಮೀಸಲಾತಿ ನೀಡಬೇಕೆಂಬ ನಿಯಮದ ಕುರಿತು ಪ್ರಶ್ನೆ ಎತ್ತಿದರು. ಆ ಅನುದಾನವನ್ನು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಯಾವ ರೀತಿಯಲ್ಲಿ ಬಳಸಿದೆ..? ಕಳೆದ ಬಾರಿ ವಿಶೇಷಚೇತನರು ಗ್ರಾಮಸಭೆಯಲ್ಲಿ ಸಲ್ಲಿಸಿದ ಅಹವಾಲುಗಳಿಗೆ ಪಂಚಾಯಿತಿ ಹೇಗೆ ಸ್ಪಂದಿಸಿದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿದರು.

ಇದಕ್ಕೆ ಉತ್ತರಿಸಿದ ಪಂಚಾಯಿತಿ ಅಧಿಕಾರಿಗಳು, ಪಂಚಾಯಿತಿಯ ಒಟ್ಟು ಆದಾಯದಲ್ಲಿ ಸಿಬ್ಬಂದಿಗೆ ನೀಡುವ ಸಂಬಳ, ವಿದ್ಯುತ್ ಬಿಲ್ ಸೇರಿದಂತೆ ಅನಿವಾರ್ಯ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ಉಳಿಯುವ ಮೊತ್ತವನ್ನಷ್ಟೇ ವಿಶೇಷಚೇತನರ ಅನುದಾನಕ್ಕೆ ಬಳಸಲು ಸಾಧ್ಯವಿದೆ ಎಂದು ತಿಳಿಸಿದರು.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಆದಾಯ ಕಡಿಮೆ ಇರುವ ಕಾರಣ ಎಲ್ಲ ವಿಶೇಷಚೇತನರ ಬೇಡಿಕೆಗಳನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯವಾಗಿಲ್ಲ. ಆದರೂ ಸಣ್ಣ ಮಟ್ಟಿನ ಕೆಲವೊಂದು ಬೇಡಿಕೆಗಳನ್ನು ಪೂರೈಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಉಳಿದ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ವಿಕಲಚೇತನರ ಸಬಲೀಕರಣ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ನೆರೆಹೊರೆಯ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷಚೇತನರಿಗೆ ವೀಲ್‌ಚೇರ್, ಊರುಗೋಲು, ಗೂಡಂಗಡಿ ಸೇರಿದಂತೆ ಸಾಧನ-ಸಲಕರಣೆಗಳನ್ನು ನೀಡಿರುವ ಕುರಿತು ಗ್ರಾಮಸ್ಥರು ಕೇಳಿದ ಪ್ರಶ್ನೆಗೆ, ತಮ್ಮ ಪಂಚಾಯಿತಿಗೆ ಆದಾಯ ಕಡಿಮೆ ಇರುವ ಕಾರಣ ಅಂತಹ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು.

ಸಭೆಯಲ್ಲಿ ವಿಶೇಷಚೇತನರ ಹಕ್ಕುಗಳು, ಸೌಲಭ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಿ ಅಗತ್ಯ ಮಾಹಿತಿಯನ್ನು ನೀಡಲಾಯಿತು.