ಸಿದ್ದಾಪುರ, ಫೆ, ೪: ಸಿದ್ದಾಪುರದ ಬಿ.ಜಿ.ಎಸ್. ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಭೇಟಿ ಬಚಾವೋ ಭೇಟಿ ಪಡವೋ ಯೋಜನೆಯ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ರೀತಾ ಮಾತನಾಡಿ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದರು. ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಮಿಷನ್ ಶಕ್ತಿ ಯೋಜನೆಯ ಸಂಯೋಜಕರಾದ ಮಮತಾ ಮಾತನಾಡಿ, ಎಲ್ಲಾ ಹೆಣ್ಣು ಮಕ್ಕಳು ಶಿಕ್ಷಣ ವಂತ ರಾಗಬೇಕೆಂದರು. ಶಿಕ್ಷಣದಿಂದಾಗಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದೆಂದು ತಿಳಿಸಿದರು.

ಮಕ್ಕಳ ಸಹಾಯ ವಾಣಿ ಅಧಿಕಾರಿ ಮಧು ಮಾತನಾಡಿ, ಮಕ್ಕಳಿಗಿರುವ ಹಕ್ಕುಗಳ ಬಗ್ಗೆ ವಿವರಿಸಿ ಏನಾದರೂ ತೊಂದರೆಗಳು ಆದಲ್ಲಿ ಮಕ್ಕಳ ಸಹಾಯವಾಣಿಗೆ ತಿಳಿಸುವಂತೆ ಹೇಳಿದರು. ಮಡಿಕೇರಿಯ ಸಖಿ ವನ್ ಸ್ಟಾಫ್ ಕೇಂದ್ರದ ಕಾನೂನು ಸಲಹೆಗಾರರಾದ ರೇವತಿ, ಪೋಕ್ಸೋ ಹಾಗೂ ಬಾಲ್ಯ ವಿವಾಹದ ಕುರಿತು ಮಾಹಿತಿಯಿತ್ತರು. ಅಲ್ಲದೆ ಈ ಪ್ರಕರಣಗಳಲ್ಲಿ ಯಾವ ರೀತಿಯಲಿ ಶಿಕ್ಷೆ ಆಗಲಿದೆ ಎಂದು ವಿವರಿಸಿದರು.

ಇದೇ ಸಂದರ್ಭ ಕಾರ್ಯಕ್ರಮದ ವಿಷಯದ ಬಗ್ಗೆ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಲಾಯಿತು ಸರಿ ಉತ್ತರ ನೀಡಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಮೇರಿ ಪವಿತ್ರ ಸ್ವಾಗತಿಸಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ರೀತಾ ವಂದಿಸಿದರು.