ನಾಪೋಕ್ಲು, ಫೆ.೪: ಇಲ್ಲಿಗೆ ಸಮೀಪದ ಚೆರಿಯಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳ ದಾನಿ ಇತ್ತೀಚೆಗೆ ನಿಧನರಾದ ಪಿ.ಪಿ ಮೊಹಿದೀನ್ ಹಾಜಿ ಅವರಿಗೆ ಪುಷ್ಪನಮನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಶೀದ್ ಅವರು ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮೊಹಿದೀನ್ ಹಾಜಿ ಅವರ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.

ಮೊಹಿದೀನ್ ಹಾಜಿ ಅವರು ೧೯೭೫ ರಲ್ಲಿ ಚೆರಿಯಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೨೫ ಸೆಂಟ್ ಜಾಗವನ್ನು ದಾನವಾಗಿ ನೀಡಿ ವಿದ್ಯಾರ್ಥಿಗಳಿಗೆ ಬಟ್ಟೆ, ಪುಸ್ತಕವನ್ನು ನೀಡಿ ವಿದ್ಯಾರ್ಜನೆಗೆ ಸಹಕರಿಸಿದ್ದರು. ಅವರು ಇತ್ತೀಚೆಗೆÀ ನಿಧನರಾಗಿದ್ದು, ಚೆರಿಯಪರಂಬು ಸರ್ಕಾರಿ ಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ, ಅಂಗನವಾಡಿ ಕೇಂದ್ರ, ಹಳೆಯ ವಿದ್ಯಾರ್ಥಿ ಸಂಘ ಹಾಗೂ ವಿದ್ಯಾರ್ಥಿಗಳ ವತಿಯಿಂದ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಸಲ್ಲಿಸಲಾಯಿತು.

ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಶಾರದ, ನಿವೃತ್ತ ಶಿಕ್ಷಕ ಧರ್ಮೇಂದ್ರ, ಭವಾನಿ, ಲೀಲಾವತಿ, ರುಕ್ಕಿಯ, ಆಶಾಲತಾ, ಆಡಳಿತ ಮಂಡಳಿ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.