ಮಡಿಕೇರಿ, ಫೆ. ೪: ಪ್ರಸವಪೂರ್ವ ಹಂತದಲ್ಲಿ ಅಂಗವೈಕಲ್ಯವನ್ನು ತಡೆಗಟ್ಟುವ ಸವಾಲುಗಳು ಮತ್ತು ಅಪಾಯಗಳನ್ನು ಗುರುತಿಸಲು ಪ್ರಸವಪೂರ್ವ ಆರೈಕೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಸುಂಟಿಕೊಪ್ಪದ ಸ್ವಸ್ಥ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಮತ್ತು ವಿಶೇಷಚೇತನರ ಆರೈಕೆದಾರರಿಗಾಗಿ ಆಯೋಜಿಸಲಾಗಿತ್ತು. ಮೈಸೂರಿನ ಪ್ರಸಿದ್ಧ ಪ್ರಸೂತಿ ಮತ್ತು ಸ್ತಿçÃರೋಗ ತಜ್ಞೆ ಡಾ. ಸೋನಿಯಾ ಮಂದಪ್ಪ ಪಾಲ್ಗೊಂಡು ಮಾತನಾಡಿ, ಗರ್ಭಧಾರಣೆ, ಸುರಕ್ಷಿತ ಹೆರಿಗೆ ಮತ್ತು ಆರೈಕೆಯಲ್ಲಿ ಅರೋಗ್ಯ ಕಾರ್ಯಕರ್ತರ ಪಾತ್ರದ ಕುರಿತು ವಿವರಿಸಿ ಕಾರ್ಯಕರ್ತರ ವೃತ್ತಿಕೌಶಲ್ಯವನ್ನು ಶ್ಲಾಘಿಸಿದರು. ಪ್ರಸವಪೂರ್ವ ಆರೈಕೆಯಲ್ಲಿನ ವಿವಿಧ ಅಂಶಗಳ ಬಗ್ಗೆ, ಬೆಳೆಯು ತ್ತಿರುವ ಮಗುವಿನ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಗರ್ಭಿಣಿ ಯರು ವಹಿಸಬೇಕಾದ ಪೋಷಣೆ, ಆರೋಗ್ಯ ತಪಾಸಣೆ, ಮಾನಸಿಕ ಆರೋಗ್ಯ ಮತ್ತು ದೈಹಿಕ ಯೋಗಕ್ಷೇಮದ ಕಾಳಜಿಯ ಬಗ್ಗೆ ಸಲಹೆ ನೀಡಿದರು.
ಶಿಶುಗಳಿಗೆ ಅಗತ್ಯವಿರುವ ವಿವಿಧ ರೋಗಗಳನ್ನು ತಡೆಗಟ್ಟುವ ಲಸಿಕೆಗಳ ಬಗ್ಗೆ ಮತ್ತು ಬಾಣಂತಿಯರ ಕಾಳಜಿಯ ಬಗ್ಗೆಯೂ ಮಾಹಿತಿ ನೀಡಿದರು. ಶಿಕ್ಷಕರು ಮತ್ತು ಕಾರ್ಯಕರ್ತೆಯರು ವೈದ್ಯರೊಂದಿಗೆ ಸಂವಾದ ನಡೆಸಿದರು.
ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ, ದ ಕೂರ್ಗ್ ಫೌಂಡೇಶನ್ ಟ್ರಸ್ಟಿ ಗಂಗಾ ಚೆಂಗಪ್ಪ, ಸ್ವಸ್ಥ ಪಾಲಿಬೆಟ್ಟ ಕೇಂದ್ರದ ಮುಖ್ಯಸ್ಥೆ ಐಶ್ವರ್ಯ ಬೋಪಯ್ಯ ಉಪಸ್ಥಿತರಿದ್ದರು. ಸ್ವಸ್ಥ ಸಂಸ್ಥೆಯ ಸಮುದಾಯ ಆಧಾರಿತ ಪುನರ್ವಸತಿ ಕೇಂದ್ರದ ಸಿಬ್ಬಂದಿ ಮತ್ತು ವಿಶೇಷ ಶಿಕ್ಷಕರು ಕಾರ್ಯಕ್ರಮವನ್ನು ನಿರ್ವಹಿಸಿದರು.