ಮಡಿಕೇರಿ, ಜ. ೧೮: ಕೊಡಗಿನ ಜಮ್ಮಾಬಾಣೆ ಸಮಸ್ಯೆ ಕುರಿತು ಬಿಜೆಪಿ ಹೇಳಿಕೆಗೆ ಅಪಾರ್ಥವೇ ಕಾರಣ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಇಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಉಚ್ಚ ನ್ಯಾಯಾಲಯವು ನೀಡಿದ ತೀರ್ಪನ್ನು ತಕ್ಷಣ ಅನುಷ್ಠಾನಗೊಳಿಸಬೇಕೆಂದೂ ತಪ್ಪಿದಲ್ಲಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವುದಾಗಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿರುವ ಕುರಿತಂತೆ ಅವರು ಪ್ರತಿಕ್ರಿಯಿಸಿದರು.

ಜಮ್ಮಾ ಬಾಣೆ ಸಮಸ್ಯೆ ಕಾಯ್ದೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸವಿವರವಾಗಿ ಈ ಹಿಂದೆ ತಿಳಿಸಿದ್ದೇನೆ. ನ್ಯಾಯಾಲಯದ ಏಕ ಸದಸ್ಯ ಪೀಠ ನೀಡಿದ ತೀರ್ಪನ್ನು ತೆಗೆದುಕೊಂಡು ಹೋಗಿ ಅದನ್ನು ಜಿಲ್ಲಾಧಿಕಾರಿಗಳಿಗೆ ಬಿಜೆಪಿಯವರು ನೀಡಿದ್ದಾರೆ. ಈ ತೀರ್ಪಿನ ಪ್ರಕಾರವೇ ತಿದ್ದುಪಡಿ ಮಾಡಿರುವುದು ಎಂಬುದನ್ನು ಅರ್ಥ ಮಾಡಿಕೊಳ್ಳದೆ ವಿತಂಡವಾದ ಮಾಡುವವರ ಹತ್ತಿರ ಏನು ಮಾತನಾಡಲು ಸಾಧ್ಯ? ಜನರಿಗೆ ನಿಜ ಏನು ಅನ್ನುವುದು ಗೊತ್ತಾಗಿದೆ ಎಂದು ನುಡಿದರು. ನ್ಯಾಯಾಲಯದ ತೀರ್ಪಿನಲ್ಲಿ ೨೦೧೧ರ ತಿದ್ದುಪಡಿ ನಂತರ ಅದನ್ನು ಎತ್ತಿಹಿಡಿದು ಸಾಂವಿಧಾನಿಕವಾಗಿ ಇದೆ ಎಂದು ಹೇಳಿ, ಇರುವಂತಹ ಗೊಂದಲ ನಿವಾರಣೆ ಮಾಡಲು ಕ್ರಮವಹಿಸಿ ಎಂದು ಹೇಳಿದೆ. ಅದರಂತೆಯೇ ನಾವು ಕಾನೂನು ಮಾಡಿದ್ದೀವಿ. ಇದನ್ನು ಅವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಮಾರ್ಮಿಕ ನುಡಿಯಾಡಿದರು.

ಜನರನ್ನು ರಾಜಕೀಯವಾಗಿ ದಾರಿ ತಪ್ಪಿಸುವ ಕೆಲಸ ಮಾಡುವುದು ಅವರಿಗೆ ಅಭ್ಯಾಸವಾಗಬಿಟ್ಟಿದೆ; ನಾವು ಜನರ ಕೆಲಸ ಮಾಡುತ್ತ ಸಾಗುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೀಗ ತಿದ್ದುಪಡಿಯಿಂದ ಬಹಳಷ್ಟು ವರ್ಷಗಳಿಂದ ಇದ್ದಂತಹ ಜಟಿಲವಾದ ಸಮಸ್ಯೆ ಪರಿಹಾರಕ್ಕೆ ಸುಗಮ ದಾರಿಯಾಗಿದೆ. ಎಲ್ಲಾ ಸಮಾಜದವರು ಕೂಡ ಇದನ್ನು ಸ್ವಾಗತಿಸಿದ್ದಾರೆ. ಕರೆದು ಗೌರವಿಸಿದ್ದಾರೆ. ಸನ್ಮಾನಿಸಿದ್ದಾರೆ. ಇದನ್ನು ತಡೆದುಕೊಳ್ಳಲು ಆಗದೆ ಕೆಲವರು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು. ವಿಧಾನಸಭಾ ಅಧಿವೇಶನದ ಬಳಿಕ ಸಂವಾದಕ್ಕೆ ತಯಾರಾಗಿದ್ದೇನೆ. ಆದರೆ ಈ ಬಗ್ಗೆ ಓದಿಕೊಂಡು ಅರ್ಥ ಮಾಡಿಕೊಂಡು ಸಂವಾದಕ್ಕೆ ಬರಲಿ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದರು. ತಿದ್ದುಪಡಿಯನ್ನು ಎಲ್ಲರೂ ಸ್ವಾಗತಿಸಿದ್ದಾರೆ. ವಿರೋಧ ಪಕ್ಷದವರೂ ಸ್ವಾಗತಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ನಿಯಮ ರೂಪಿಸಿ, ಹೋಬಳಿವಾರು ಶಿಬಿರ ಆಯೋಜನೆ ಮಾಡುವ ಮೂಲಕ ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡುವುದಾಗಿ ಶಾಸಕ ಪೊನ್ನಣ್ಣ ಹೇಳಿದರು.