ಚೆಯ್ಯಂಡಾಣೆ, ಜ. ೯: ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಜಗತ್ತು ಬದಲಾವಣೆಗೊಂಡು ಎಐ ತಂತ್ರಜ್ಞಾನದತ್ತ ಮುಖಮಾಡುತ್ತಿರುವುದು ದುಃಖಕರ. ಮುಂದಿನ ದಿನಗಳಲ್ಲಿ ಎಐ ತಂತ್ರಜ್ಞಾನವು ಮಾನವನನ್ನು ಆಳುವುದರಲ್ಲಿ ಸಂಶಯವಿಲ್ಲ ಎಂದು ಮಡಿಕೇರಿಯ ಹಿರಿಯ ವಕೀಲ ಕೆ.ಪಿ. ಬಾಲಸುಬ್ರಮಣ್ಯ ಅವರು ಅಭಿಪ್ರಾಯಪಟ್ಟರು.

ನಾಪೋಕ್ಲು ಸಮೀಪದ ಹೊದವಾಡ ಗ್ರಾಮದ ರಾಫೆಲ್ಸ್ ಇಂಟರ್‌ನ್ಯಾಷನಲ್ ಇಂಗ್ಲಿಷ್ ಶಾಲೆ ಮತ್ತು ಪಿ.ಯು. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ಪರೀಕ್ಷೆಗೂ ಮುನ್ನ ಮೊಬೈಲ್ ಅವಲಂಬಿಸಿರುವುದು ವಿಷಾದನೀಯ. ಜಗತ್ತು ಎಐ ತಂತ್ರಜ್ಞಾನದತ್ತ ಮುಖ ಮಾಡಿರುವುದು ದೊಡ್ಡ ವಿಪರ್ಯಾಸ. ಮನುಷ್ಯನೇ ಇದಕ್ಕೆ ಅವಕಾಶ ಕಲ್ಪಿಸಿದ್ದಾನೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವಿಲ್ಲದಿದ್ದರೆ ಮಾನವನು ಶೂನ್ಯವಾಗಿ ಬಿಡುತ್ತಾನೆ. ಅವಶ್ಯಕತೆಗೆ ತಕ್ಕಂತೆ ಮೊಬೈಲ್ ಬಳಕೆ ಮಾಡುವ ಮೂಲಕ ಶಿಕ್ಷಣದ ಕಡೆ ಹೆಚ್ಚು ಆಸಕ್ತಿಯನ್ನು ತೋರಿ ಜೀವನದಲ್ಲಿ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಡಿಕೇರಿ ಎಫ್.ಎಂ.ಸಿ. ಕಾಲೇಜಿನ ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥ ಡಾ. ಎಂ.ಪಿ. ಕೃಷ್ಣ ಮಾತನಾಡಿ, ಪೋಷಕರು ಮೊಬೈಲ್ ಫೋನ್ ನೀಡದೆ ಪರಿಸರ ಸ್ನೇಹಿಯಾಗಿ ಮಕ್ಕಳನ್ನು ಬೆಳೆಸಬೇಕು. ಮೊಬೈಲ್ ರೇಡಿಯೇಶನ್‌ನಿಂದ ಕ್ಯಾನ್ಸರ್, ಗರ್ಭಕೋಶದ ತೊಂದರೆ, ಹಾಗೆ ಗಂಡು ಮಕ್ಕಳಿಗೆ ಹೃದಯಾಘಾತದ ತೊಂದರೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಮೊಬೈಲ್ ಫೋನ್‌ಅನ್ನು ವಿದ್ಯಾರ್ಥಿಗಳು ಮಿತವಾಗಿ ಬಳಸಬೇಕು. ಗ್ರಾಮಾಂತರ ಪ್ರದೇಶದಲ್ಲಿರುವ ಈ ಶಾಲೆ ಶೇ. ೧೦೦ ರಷ್ಟು ಫಲಿತಾಂಶವನ್ನು ಪಡೆದಿರುವುದು ಶ್ಲಾಘನೀಯ. ಸಂಸ್ಥೆಯನ್ನು ಬೆಳೆಸಲು ಪೋಷಕರ ಸಹಕಾರ ಅಗತ್ಯ ಹಾಗೆ ವಿದ್ಯಾರ್ಥಿಗಳು ದಿನನಿತ್ಯ ಶಾಲೆಗೆ ಹಾಜರಾಗಿ ಶಾಲೆಯ ಹೆಸರನ್ನು ಎತ್ತರಕ್ಕೆ ಬೆಳೆಸಿ ಗುರುತಿಸಿಕೊಳ್ಳಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್. ಕೆ. ಮೆಹಬೂಬ್ ಸಾಬ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾ ವಿಭಾಗ ವಾಣಿಜ್ಯ ವಿಭಾಗ, ವಿಜ್ಞಾನ ವಿಭಾಗಗಳಿಂದ ಪ್ರಾರಂಭವಾದ ಈ ಕಾಲೇಜು ೯ ವರ್ಷವನ್ನು ಯಶಸ್ಸಿನಿಂದ ಪೂರೈಸುತ್ತಾ ಬಂದಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಸಾಧನೆ ಮಾಡುತ್ತಿದ್ದಾರೆ. ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ಕೂಡ ಪಾಲ್ಗೊಂಡು ಸಾಧನೆ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೋಷಕರ ದಿನಾಚರಣೆಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೋಷಕರಿಗೆ ಕೂಡ ಕಾರ್ಯಕ್ರಮದಲ್ಲಿ ಗಣ್ಯರು ಬಹುಮಾನ ವಿತರಿಸಿದರು. ಬಳಿಕ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ನಡೆದ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿತು. ಕಾಲೇಜಿನ ಪ್ರಾಂಶುಪಾಲೆ ಪಿ.ಜಿ. ಕಲಾವತಿ ಶಾಲೆ ಮತ್ತು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಹರಿಶ್ಚಂದ್ರ ಹಂಸ, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಮೊಯ್ದು ಕೊಟ್ಟಮುಡಿ, ಶಾಲೆಯ ಉಪನ್ಯಾಸಕ ಹಾಗೂ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ರಿಶಾನ ಹಾಗೂ ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಹುಸೈನ್ ಹಬೀಬ್ ಮೆಕ್ಕಿ ಹಾಗೂ ಹನ್ನತ್ ನಿರೂಪಿಸಿದರು. ಶಿಕ್ಷಕಿಯರಾದ ಪರ್ವೀನ್ ಸಲೀಂ ಸ್ವಾಗತಿಸಿ, ಫಜಿಶಾ ವಂದಿಸಿದರು.