ಮಡಿಕೇರಿ, ಜ. ೯: ಕೂತಿ ಗ್ರಾಮದಲ್ಲಿ ಯಾರಿಗೂ ಕೂಡ ದೇವಸ್ಥಾನಕ್ಕೆ, ಕುಡಿಯುವ ನೀರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸಿರುವುದಿಲ್ಲ ಎಂದು ಕೂತಿ ಗ್ರಾಮ ಸಮಿತಿ ಅಧ್ಯಕ್ಷ ಹೆಚ್.ಎಂ. ಜಯರಾಂ ಹಾಗೂ ಪ್ರಮುಖರು ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು ಕೂತಿ ಗ್ರಾಮದಲ್ಲಿ ಇಲ್ಲಿಯವರೆಗೆ ಸಾಮೂಹಿಕ ಬಹಿಷ್ಕಾರದ ಪ್ರಕರಣಗಳು ಕಂಡುಬAದಿರುವುದಿಲ್ಲ. ಪರಿಶಿಷ್ಟರಿಗೆ ದೇವಾಲಯ ಹಾಗೂ ಸಭೆ-ಸಮಾರಂಭಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಗ್ರಾಮದ ಅಭಿವೃದ್ಧಿ, ದೇವಸ್ಥಾನದ ಪೂಜಾ ಕಾರ್ಯ, ಹಬ್ಬ ಹರಿದಿನಗಳು, ಶವಸಂಸ್ಕಾರ, ಕಷ್ಟ ಸುಖಗಳಿಗೆ ಸ್ಪಂದಿಸುವ ಸಲುವಾಗಿ ಸಮಿತಿಯನ್ನು ರಚಿಸಿಕೊಂಡಿದ್ದು, ಗ್ರಾಮಸ್ಥರ ಒಪ್ಪಿಗೆ ಮೇರೆಗೆ ಕೆಲವು ನಿಯಮ ಕಟ್ಟುಪಾಡುಗಳನ್ನು ಮಾಡಿಕೊಂಡು ಬರಲಾ ಗುತ್ತಿದೆ. ರೂ. ೫೦ ಲಕ್ಷದಲ್ಲಿ ಸಮುದಾಯ ಭವನ, ೬೦ ಲಕ್ಷದಲ್ಲಿ ದೇವಸ್ಥಾನ ಜೀರ್ಣೋದ್ಧಾರ, ೧೨ ಲಕ್ಷದಲ್ಲಿ ಶವಾಗಾರ ನಿರ್ಮಾಣ ಕಾರ್ಯಕ್ಕಾಗಿ ಗ್ರಾಮಸ್ಥರಿಂದ ತೆರಿಗೆ ರೂಪದಲ್ಲಿ ಹಣ ಸಂಗ್ರಹ ಮಾಡಿ ಅಭಿವೃದ್ಧಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಗ್ರಾಮ ದಲ್ಲಿ ಯಾರಾದರು ಮೃತಪಟ್ಟದಲ್ಲಿ ರೂ. ೨೫ ಸಾವಿರ ಮರಣ ನಿಧಿಯನ್ನು ಕುಟುಂಬಕ್ಕೆ ನೀಡಲಾಗುವುದು. ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ.

ಬಡ ರೋಗಿಗಳಿಗೆ ಆಸ್ಪತ್ರೆ ಚಿಕಿತ್ಸೆ ವೆಚ್ಚ ಭರಿಸಿಕೊಂಡು ಬರಲಾಗುತ್ತಿದೆ. ಮದುವೆ ಸಮಾರಂಭಗಳಿಗೆ ಸಹಕಾರ ನೀಡುತ್ತೇವೆ. ೨೫ ವರ್ಷದಿಂದ ಗ್ರಾಮದಲ್ಲಿ ಮದ್ಯ ತಯಾರಿಕೆ ಹಾಗೂ ಮಾರಾಟ ನಿಷೇಧಿಸಲಾಗಿದೆ.

ಸರಕಾರದ ಅನುದಾನಕ್ಕೆ ಕಾಯದೆ ರಸ್ತೆ, ಕೆರೆ ಕಟ್ಟೆಗಳ ದುರಸ್ತಿ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗ್ರಾಮದ ವಿಚಾರದಲ್ಲಿ ಪೊಲೀಸ್ ಠಾಣೆಗೆ ದೂರು ಬಂದರೂ ನಮ್ಮ ಸಮಿತಿಯನ್ನು ವಿಚಾರಿಸಿದ ಬಳಿಕವೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.