ಕುಶಾಲನಗರ, ಜ. ೯: ಜಿಲ್ಲೆಯಲ್ಲಿ ಕಾವೇರಿ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಕಾರ್ಯಪ್ರವೃತ್ತಗೊಂಡು ಪಟ್ಟಣ, ಗ್ರಾಮಗಳ ತ್ಯಾಜ್ಯಗಳು ನೇರವಾಗಿ ನದಿಗೆ ಸೇರುವುದನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕೆಂದು ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಕೇಂದ್ರ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ರಾಸಾಯನಿಕ ನೊರೆಗಳಿಂದ ಕಾವೇರಿ ನದಿ ವಿಷಪೂರಿತವಾಗಿ ಹರಿದ ಸಂದರ್ಭ ನದಿಯಲ್ಲಿ ಸ್ನಾನ ಮಾಡಿದ ನಾಗರಿಕರಿಗೆ ಸಮಸ್ಯೆ ಉಂಟಾಗಿದ್ದ ಬಗ್ಗೆ ಇತ್ತೀಚಿಗೆ ‘ಶಕ್ತಿ’ ವರದಿ ಮಾಡಿತ್ತು.
ಇದನ್ನು ಗಮನಿಸಿದ ಸಂಸದರು ಪತ್ರದ ಮೂಲಕ ಕ್ರಮಕ್ಕೆ ಸೂಚಿಸಿದ್ದಾರೆ. ನದಿ ತೀರದ ಪಟ್ಟಣ ಗ್ರಾಮಗಳಿಂದ ಕಲುಷಿತ ಮತ್ತು ರಾಸಾಯನಿಕ ತ್ಯಾಜ್ಯಗಳು ನೇರವಾಗಿ ನದಿಗೆ ಸೇರುತ್ತಿರುವ ಬಗ್ಗೆ ವರದಿಗಳು ಬರುತ್ತಿದ್ದು, ಇದರಿಂದ ನಾಗರಿಕರಿಗೆ ಆರೋಗ್ಯದಲ್ಲಿ ಏರುಪೇರಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಂಸದರು, ಕೂಡಲೇ ಸಂಬAಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ವರದಿ ನೀಡುವಂತೆ ಕೋರಿದ್ದಾರೆ.
ಕುಶಾಲನಗರ ಒಳಚರಂಡಿ ಯೋಜನೆ ಕಾಮಗಾರಿ ತಕ್ಷಣ ಪೂರ್ಣಗೊಳಿಸಿ ನದಿ ಕಲುಷಿತ ಉಂಟಾಗುವುದನ್ನು ತಪ್ಪಿಸಬೇಕು, ನದಿ ಮಾಲಿನ್ಯ ತಪ್ಪಿಸುವ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನದಿ ನೀರಿನ ಗುಣಮಟ್ಟ ಕ್ಷೀಣಗೊಳ್ಳುತ್ತಿರುವ ಬಗ್ಗೆ ಇಲಾಖೆಗಳು ಮತ್ತು ಮಾನವ ಹಕ್ಕುಗಳ ಆಯೋಗ ಈ ಬಗ್ಗೆ ಸಂಬAಧಿಸಿದ ಇಲಾಖೆಗಳಿಗೆ ನೋಟಿಸ್ ನೀಡಿರುವುದನ್ನು ಪತ್ರದಲ್ಲಿ ಸಂಸದರು ತಿಳಿಸಿದ್ದಾರೆ.