ಮುಳ್ಳೂರು, ಜ ೧: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹೊಸವರ್ಷವನ್ನು ‘ಹೊಸ ವರ್ಷ, ಹೊಸ ಚಿಂತನೆ ಹೊಸ ನಡೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಅವರ ಮಾರ್ಗದರ್ಶನದಂತೆ ಗುರುವಾರ ಮುಂಜಾನೆ ಎದ್ದ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿ ಹಾಗೂ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಶಾಲೆಗೆ ಆಗಮಿಸಿದರು. ನಂತರ ಶಾಲಾ ಆವರಣದಲ್ಲಿರುವ ಸಂಕಲ್ಪ ಕುಟಿರದಲ್ಲಿ ನವ ವರ್ಷದ ಸಂಸ್ಕೃತ ಶ್ಲೋಕದೊಂದಿಗೆ ದೀಪ ಬೆಳಗಿಸಿ ಪ್ರಾರ್ಥಿಸಿದರು. ನಂತರ ಈ ವರ್ಷದ ಕನಸು ಏನೆಂಬುದನ್ನು ವಿಷನ್ ಬೋರ್ಡಿನಲ್ಲಿ ಬರೆದುಕೊಂಡರು. ಈ ವರ್ಷದಲ್ಲಿ ಏನೆಲ್ಲಾ ಕಾರ್ಯಗಳನ್ನು ಮಾಡುತ್ತೇವೆ ಎಂಬ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರು. ನಂತರ ಕಳೆದ ವರ್ಷ ನಾವೇನು ಮಾಡಿದೆವು ಎಂಬುದನ್ನು ಸಹ ಸ್ಮತಿ ಕುಟೀರದಲ್ಲಿ ಕುಳಿತು ವಿಮರ್ಶಿಸಿದರು. ನಂತರ ಪ್ರತಿಜ್ಞಾ ಕುಟೀರಕ್ಕೆ ತೆರಳಿದ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕಾರ ಮಾಡುವ ಮೂಲಕ ಈ ವರ್ಷ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ಪ್ರಮಾಣಿಕರಿಸಿದರು. ಹೊಸ ವರ್ಷದ ಹಿನ್ನಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದರು.
-ಭಾಸ್ಕರ್ ಮುಳ್ಳೂರು