ಸಿದ್ದಾಪುರ, ಡಿ. ೨೮: ಕಾಫಿ ತೋಟದೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಕಾಫಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಸಂಬAಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಾಪುರ ಸಮೀಪದ ಬಾಡಗ - ಬಾಣಂಗಾಲ ಗ್ರಾಮದ ಎಲ್ಕ್ಹಿಲ್ ಖಾಸಗಿ ಸಂಸ್ಥೆಗೆ ಸೇರಿದ ಕಾಫಿ ತೋಟದೊಳಗೆ ಅಕ್ರಮವಾಗಿ ನುಗ್ಗಿ ಇಬ್ಬರು ವ್ಯಕ್ತಿಗಳು ಕಾಫಿ ಗಿಡಗಳಿಂದ ಹಣ್ಣಾಗಿರುವ ಕಾಫಿ ಫಸಲುಗಳನ್ನು ಕೊಯ್ಲು ಮಾಡಿ ಚೀಲದಲ್ಲಿ ತುಂಬಿಸುತ್ತಿದ್ದ ಸಂದರ್ಭ ಕಾಫಿ ತೋಟದ ಸಿಬ್ಬಂದಿ ಅದನ್ನು ಕಂಡ ಹಿನ್ನೆಲೆಯಲ್ಲಿ ಕೂಡಲೇ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿದೆ.

ಅಂದಾಜು ೧೦೦ ಕೆ.ಜಿ.ಯಷ್ಟು ಕಾಫಿ ಹಣ್ಣುಗಳನ್ನು ಕೊಯ್ಲು ಮಾಡಿ ಪರಾರಿಯಾಗಿದ್ದು, ಈ ಸಂದರ್ಭ ಕಾಫಿ ತೋಟದ ರಸ್ತೆಯಲ್ಲಿ ಸ್ಕೂಟಿ (ಕೆ.ಎ.೧೨. ಎಕ್ಸ್ ೨೨೬೦)ನ್ನು ಆರೋಪಿಗಳು ನಿಲ್ಲಿಸಿದ್ದರು ಎಂದು ತೋಟದ ವ್ಯವಸ್ಥಾಪಕ ಸಿ.ಎನ್. ಕಾವೇರಿಯಪ್ಪ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.